ರಾಜ್ಯದಲ್ಲಿಲ್ಲ ಸಿಎಂ ಸ್ಥಾನ ಬದಲಾವಣೆ – ಅಹಿಂದ ಅಸ್ತ್ರಕ್ಕೆ ಶರಣಾಯ್ತು ಕಾಂಗ್ರೆಸ್ ಹೈಕಮಾಂಡ್
ಬಿಹಾರದಲ್ಲಿ ಮಹಾಘಟಬಂಧನ್ ಸೋಲಿನ ಬಳಿಕ ಕಾಂಗ್ರೆಸ್ ಪರಾಮರ್ಶೆಗೆ ಇಳಿದಿದೆ. ಮೇಲ್ನೋಟಕ್ಕೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ತಂತ್ರಗಾರಿಕೆಯಿಂದ ತಮಗೆ ಸೋಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಅಸಲಿ ವಿಚಾರ ಏನೆಂಬುದು ಕಾಂಗ್ರೆಸ್ಗೂ ತಿಳಿದಿದೆ. ಬಿಹಾರ ರಾಜಕಾರಣದಲ್ಲಿ ಜಾತಿ ಸಮೀಕರಣ ಬಳಕೆ ಮಾಡುವುದರಲ್ಲಿ ಸಂಪೂರ್ಣ ಎಡವಿದ ಕಾಂಗ್ರೆಸ್ನ ನಡೆ ಹಿಂದುಳಿದ ವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ನ ಹೀನಾಯ ಸೋಲಿಗೆ ಹಿಂದುಳಿದ ವರ್ಗಗಳ ಮತಬ್ಯಾಂಕ್ ಪರಿಣಾಮ ಬೀರಿದೆ. ಇದೇ ತಪ್ಪು ಕರ್ನಾಟಕದಲ್ಲಿಯೂ ಮಾಡುವುದು ಬೇಡ ಎಂದು ನಿರ್ಧರಿಸಿರುವ ಕಾಂಗ್ರೆಸ್ ವರಿಷ್ಠರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸುವ ಅಚಲ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ದೇಶದಲ್ಲಿ ಕಾಂಗ್ರೆಸ್ ಆಡಳಿತ ಎನ್ನುವುದು ಮರೀಚಿಕೆ ಎಂಬಂತೆ ಆಗುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಹೊಸ ಪ್ರಯೋಗ ಮಾಡಿ ಇಲ್ಲಿನ ಅಧಿಕಾರವನ್ನೂ ಕಳೆದುಕೊಳ್ಳುವ ಧೈರ್ಯ ಕಾಂಗ್ರೆಸ್‌ಗೆ ಇಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಹಿಂದುಳಿದ ವರ್ಗಗಳ ಮತ ಕೈ ಚೆಲ್ಲಿ ಹೋಗುವ ಸಾಧ್ಯತೆ ಇದೆ. ಇದೆಲ್ಲ ರಾಜಕೀಯ ಲೆಕ್ಕಾಚಾರ ಮಾಡಿರುವ ಕೈ ಹೈಕಮಾಂಡ್ ಸಿದ್ದರಾಮಯ್ಯರಿಗೆ ನೀವು ಸೇಫ್ ಎಂಬ ಸಂದೇಶವನ್ನು ಈಗಾಗಲೇ ರವಾನೆ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲಿನ ಕಹಿ ; ರಾಜ್ಯದಲ್ಲಿ ‘ನವೆಂಬರ್ ಕ್ರಾಂತಿ’ಗೆ ತಿಲಾಂಜಲಿ
ಉತ್ತರ ಭಾರತದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಪವಾದ ಇದೆ. ಹೀಗಿರುವಾಗ ದಕ್ಷಿಣ ಭಾರತದಲ್ಲಿಯೂ ಇಂತಹ ತಪ್ಪನ್ನು ಪುನರಾವರ್ತಿಸುವ ಧೈರ್ಯ ಮಾಡದ ಕಾಂಗ್ರೆಸ್ ಹೈಕಮಾಂಡ್ ಸದ್ಯ ಯಾವುದೇ ಹೊಸ ಪ್ರಯೋಗ ಬೇಡ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಡಾಖಂಡಿತವಾಗಿ ಹೇಳಿದೆ ಎನ್ನಲಾಗಿದೆ. ಇದರಿಂದಾಗಿ ರಾಜ್ಯದ ಸಿಎಂ ಆಗುವ ಕನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್ಗೂ ಈ ಬಾರಿಯೂ ನಿರಾಶೆ ಕಟ್ಟಿಟ್ಟ ಬುತ್ತಿ..!



