‘ನವೆಂಬರ್​ ಕ್ರಾಂತಿ ಇಲ್ಲದ ಮೇಲೆ ಸಿಎಂ, ಡಿಸಿಎಂ ದೆಹಲಿಯಲ್ಲಿ ಏನು ಮಾಡ್ತಿದ್ದಾರೆ’ : ಆರ್​.ಅಶೋಕ್​

ಬೆಂಗಳೂರು : ನವೆಂಬರ್​ ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಬದಲಾವಣೆ ಆಗುವುದಿಲ್ಲ ಎನ್ನುವ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿ ಕುಳಿತಿರುವುದು ಏಕೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ವಂಗ್ಯವಾಡಿದ್ದಾರೆ. ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಹರಿದಾಡುತ್ತಿರುವ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ ಒಂದು ಗೊಂದಲದ ಗೂಡು ಎಂದು ಜರಿದಿದ್ದಾರೆ.

ನವೆಂಬರ್​ ತಿಂಗಳಲ್ಲಿ ಅಧಿಕಾರ ಹಸ್ತಾಂತರವಾಗುತ್ತೆ ಎಂಬ ಮಾತನ್ನು ನಾವು ಪದೇ ಪದೇ ಕೇಳುತ್ತಿದ್ದೆವು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಆ ರೀತಿ ಏನೂ ಇಲ್ಲ ಅಂತಿದ್ದಾರೆ. ಹಾಗಿದ್ದ ಮೇಲೆ ಇವರೆಲ್ಲ ದೆಹಲಿಗೆ ಹೋಗಿ ಏಕೆ ಕುಳಿತಿದ್ದಾರೆ ? ಕಾಂಗ್ರೆಸ್​ ಕಚೇರಿಗಳ ಶಂಕುಸ್ಥಾಪನೆಗೆ ಆಹ್ವಾನ ನೀಡಲು ಐದು ನಿಮಿಷ ಸಾಕು. ಅಥವಾ ಅರ್ಧ ದಿನ ಬೇಕು ಎಂದರೂ ಒಪ್ಪಿಕೊಳ್ಳೋಣ. ಆದರೆ ಡಿ.ಕೆ ಶಿವಕುಮಾರ್​ ಇಷ್ಟು ದಿನಗಳಿಂದ ದೆಹಲಿ ಕುಳಿತಿರುವುದು ಏಕೆ ಅಂತಾ ಪ್ರಶ್ನಿಸಿದ್ದಾರೆ.

ಡಿ.ಕೆ ಶಿವಕುಮಾರ್​ ಮತ್ತವರ ತಮ್ಮ ದೆಹಲಿಯಲ್ಲೇ ಏಕೆ ಕುಳಿತಿದ್ದಾರೆ ? ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಪದೇ ಪದೇ ದೆಹಲಿಗೆ ಭೇಟಿ ನೀಡುವ ಅವಶ್ಯಕತೆ ಏನಿತ್ತು. ಇದನ್ನೆಲ್ಲ ನೋಡ್ತಿದ್ರೆ ಎರಡೂವರೆ ವರ್ಷಗಳ ಹಿಂದೆಯೇ ಈ ರೀತಿ ಒಪ್ಪಂದ ಆಗಿತ್ತು ಎನ್ನುವುದು ಸ್ಪಷ್ಟ. ಇಲ್ಲವಾಗಿದ್ದರೆ ಇಷ್ಟು ದಿನ ಹೋಗಿ ಕುಳಿತುಕೊಳ್ಳುವ ಅಗತ್ಯವಿರುತ್ತಿರಲಿಲ್ಲ. ದೆಹಲಿಯಲ್ಲಿ ಇವರಿಗೆಲ್ಲ ಅಂಥಾ ಘನಂದಾರಿ ಕೆಲಸ ಏನಿದೆ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ತೂಗುಯ್ಯಾಲೆಯಲ್ಲಿದೆ. ಸರ್ಕಾರದಲ್ಲಿ ಮ್ಯೂಸಿಕ್​ ಚೇರ್​ ನಡೆಯುತ್ತಿದೆ. ಬಿಜೆಪಿ ಮಾಡುತ್ತಿರುವ ಆರೋಪ ಸುಳ್ಳಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇವರೆಲ್ಲ ಏಕೆ ಭೇಟಿ ಮಾಡುತ್ತಿದ್ದಾರೆ ? ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್​ನಲ್ಲಿಯೂ ಗೊಂದಲ ಇದೆ. ಇದಕ್ಕಾಗಿಯೇ ರಾಹುಲ್​ ಗಾಂಧಿ ಮುಖ ತೋರಿಸಲು ಸಾಧ್ಯವಾಗದೇ ಗುಡು ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಫಿಕ್ಸ್: ನಾನು ಮೆಂಟಲಿ ಫಿಟ್ ಇದ್ದೇನೆ ಅಂದಿದ್ದೇಕೆ ಬಂಡೆ…!?

ರಾಜ್ಯದಲ್ಲಿ ಪ್ರಸ್ತುತ ಅಧಿಕಾರ ಹಸ್ತಾಂತರ ಪರ್ವ ನಡೆಯುತ್ತಿದೆ. ಸಂಪುಟ ಪುನಾರಚನೆ ಆದರೆ ಡಿಕೆಶಿಗೆ ಪಂಗನಾಮ ಗ್ಯಾರಂಟಿ.ಇಷ್ಟು ದಿನ‌ ಟೆಂಪಲ್ ರನ್ ಮಾಡಿದ್ದೆಲ್ಲ ವ್ಯರ್ಥವಾಗುತ್ತದೆ. ಹಾಸನಾಂಬೆ ಎರಡು ಸಲ ವರ ಕೊಟ್ಟಿದ್ದೂ ಹೋಗುತ್ತದೆ. ಸಂಪುಟ ಪುನರಾಚನೆ ಆಗದಿದ್ದರೆ ಮಾತ್ರ ಡಿ.ಕೆ ಶಿವಕುಮಾರ್​ಗೆ ಸಿಎಂ ಆಗುವ ಅವಕಾಶ ಇದೆ ಎಂದು ಆರ್​.ಅಶೋಕ್​ ಭವಿಷ್ಯ ನುಡಿದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories