ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಇಪಿಎಫ್, ಇಎಸ್ಐ ಸೌಲಭ್ಯ : ರಾಜ್ಯಕ್ಕೆ ಮಾದರಿ ಎನಿಸಿದ ಉಡುಪಿ ಜಿಲ್ಲೆ
ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಇಎಸ್ಐ ಹಾಗೂ ಇಪಿಎಫ್ ಸೇವೆಗಳನ್ನು ಒದಗಿಸುವ ಮಹತ್ವದ ಯೋಜನೆಯನ್ನು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಈ ಮೂಲಕ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಿದ ಕರ್ನಾಟಕದ ಪ್ರಪ್ರಥಮ ಜಿಲ್ಲೆ ಎಂಬ ಕೀರ್ತಿಗೆ ಉಡುಪಿ ಪಾತ್ರವಾಗಿದೆ.
ಉಡುಪಿ,ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಸೌಲಭ್ಯಗಳಿಗೆ ಚಾಲನೆ ನೀಡಲಾಗಿತ್ತು. ಈ ಪೈಕಿ ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಸೌಲಭ್ಯ ಭಾಗಶಃ ಆರಂಭಗೊಂಡಿದೆ.
ಆದರೆ ಉಡುಪಿ ಜಿಲ್ಲೆಯಲ್ಲಿ ಸೇವಾ ಭದ್ರತೆ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಾಗಿದ್ದು ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯ್ತಿ ಸಿಬ್ಬಂದಿ ತಮ್ಮ ಮೂಲವೇತನ ಹಾಗೂ ತುಟ್ಟಿ ಭತ್ಯೆಯ ಶೇಕಡಾ 12ರಷ್ಟನ್ನು ಪಾವತಿ ಮಾಡಬೇಕಿದೆ.
ಗ್ರಾಮ ಪಂಚಾಯತ್ ತನ್ನ ಸಮನಾದ ಪಾಲನ್ನು ಪಿಎಫ್ ವಂತಿಗೆ ಪಾವತಿ ಮಾಡುತ್ತದೆ. ಇನ್ನು ಇಎಸ್ಐ ವಿಚಾರಕ್ಕೆ ಬಂದರೆ ಸಿಬ್ಬಂದಿ ಶೇಕಡಾ 0.75ರಷ್ಟನ್ನು ಪಾವತಿ ಮಾಡಿದರೆ ಗ್ರಾಮ ಪಂಚಾಯ್ತಿಯಿಂದ 3.25 ಪ್ರತಿಶತ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.
ಇದರಿಂದ ಗ್ರಾಮ ಪಂಚಾಯ್ತಿ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ಭದ್ರತೆ, ಪಿಂಚಣಿ ಭದ್ರತೆ ಸಿಕ್ಕಂತಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಿಂದ 26 ಲಕ್ಷ ಗಳಿಸಿ; ಸರ್ಕಾರದ ಯೋಜನೆಯ ಗರಿಷ್ಠ ಲಾಭ ಪಡೆಯಿರಿ
ಉಡುಪಿ ಜಿಲ್ಲೆಯಾದ್ಯಂತ ಒಟ್ಟೂ 155 ಗ್ರಾಮ ಪಂಚಾಯ್ತಿಗಳಿದ್ದು ಈ ಪೈಕಿ 654 ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ 149 ಗ್ರಂಥಾಲಯ ಮೇಲ್ವಿಚಾರಕರು ಈ ಸೌಲಭ್ಯದ ಲಾಭ ಪಡೆಯಲಿದ್ದಾರೆ.



