
ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ನಿವಾಸ ಸೇರಿದಂತೆ ವಿವಿಧ ಕಡೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ್ದ ಶೋಧ ಕಾರ್ಯ ಸುಮಾರು 24 ಗಂಟೆಗಳ ಬಳಿಕ ಮುಕ್ತಾಯಗೊಂಡಿದೆ.
ಬೆಳಗಾವಿ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹತ್ವದ ದಾಖಲೆಗಳು, ಚಿನ್ನಾಭರಣ, ಬೇನಾಮಿ ಆಸ್ತಿ ದಾಖಲೆಗಳು ಹಾಗೂ ಬಾರ್ ಪರವಾನಗಿ ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ನಗರದಲ್ಲೇ ಆರುಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಟಿವಿ ಸೆಂಟರ್ ಪ್ರದೇಶದಲ್ಲಿರುವ ವೈ. ಮಂಜುನಾಥ್ ಅವರ ನಿವಾಸದಲ್ಲಿಯೂ ಪರಿಶೀಲನೆ ಪೂರ್ಣಗೊಂಡಿದೆ. ಕಾರ್ಯಾಚರಣೆ ಮುಗಿದ ತಕ್ಷಣ ಅಧಿಕಾರಿಗಳ ತಂಡ ಸ್ಥಳದಿಂದ ತೆರಳಿದೆ.
ಶೋಧ ಕಾರ್ಯ ಅಂತ್ಯವಾದ ಬಳಿಕ ವೈ. ಮಂಜುನಾಥ್ ಅವರು ಬೆಂಗಳೂರಿನಿಂದ ಸರ್ಕಾರಿ ವಾಹನದಲ್ಲಿ ಬೆಳಗಾವಿಗೆ ಆಗಮಿಸಿ ತಮ್ಮ ನಿವಾಸಕ್ಕೆ ಮರಳಿದರು. ಇಡಿ ಅಧಿಕಾರಿಗಳ ತಂಡ ವಾಪಸ್ಸಾದ ಬಳಿಕವೇ ಅವರು ಮನೆ ಸೇರಿರುವುದು ಗಮನಾರ್ಹವಾಗಿದೆ.
ಇದರ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮೂಲದ ಲೋಬೋ ಎಂಬಾತನಿಗಾಗಿ ಅಧಿಕಾರಿಗಳು ಹುಡುಕಾಟ ಮುಂದುವರಿಸಿದ್ದಾರೆ. ಬೆಳಗಾವಿಯಲ್ಲಿನ ಶೋಧದ ವೇಳೆ ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಇಡಿ ತಂಡಗಳನ್ನು ಗೋವಾಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಉಳಿದ ಅಧಿಕಾರಿಗಳು ಬೆಂಗಳೂರಿನತ್ತ ತೆರಳಿರುವ ಸಾಧ್ಯತೆಯೂ ಇದೆ.



