ಪವರ್ ಪೆಟ್ರೋಲ್ ಅಥವಾ ನಾರ್ಮಲ್? ನಿಮ್ಮ ವಾಹನಕ್ಕೆ ಯಾವುದು ಸೂಕ್ತ?

ಪವರ್ ಪೆಟ್ರೋಲ್ ಹೆಚ್ಚು ಮೈಲೇಜ್ ಕೊಡುತ್ತದೆಯೇ ಎಂಬ ಪ್ರಶ್ನೆ ಅನೇಕ ವಾಹನ ಸವಾರರಲ್ಲಿ ಇದೆ. ನಾರ್ಮಲ್ ಮತ್ತು ಪವರ್ ಪೆಟ್ರೋಲ್ ನಡುವಿನ ವ್ಯತ್ಯಾಸ, ಪ್ರಯೋಜನ ಹಾಗೂ ಬಳಕೆಯ ಬಗ್ಗೆ ತಿಳಿದುಕೊಳ್ಳಿ.

ಪೆಟ್ರೋಲ್ ಬಂಕ್‌ಗೆ ಹೋದಾಗ “ನಾರ್ಮಲ್ ಪೆಟ್ರೋಲ್ ಹಾಕಬೇಕಾ ಅಥವಾ ಪವರ್ ಪೆಟ್ರೋಲ್?” ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತದೆ. ಹೆಚ್ಚಿನ ಬೆಲೆ ಇರುವ ಪವರ್ ಪೆಟ್ರೋಲ್ ಬಳಸಿದರೆ ಮೈಲೇಜ್ ಹೆಚ್ಚುತ್ತದೆಯೇ ಎಂಬ ಕುತೂಹಲ ಬಹುತೇಕರಲ್ಲಿದೆ. ಆದರೆ ಇದರ ಉತ್ತರ ವಾಹನದ ಇಂಜಿನ್ ಮಾದರಿಯ ಮೇಲೆ ಅವಲಂಬಿತವಾಗಿದೆ.

ಪವರ್ ಪೆಟ್ರೋಲ್ ಮತ್ತು ನಾರ್ಮಲ್ ಪೆಟ್ರೋಲ್ ನಡುವಿನ ಪ್ರಮುಖ ವ್ಯತ್ಯಾಸ ಆಕ್ಟೇನ್ ರೇಟಿಂಗ್‌ನಲ್ಲಿ ಇದೆ. ಸಾಮಾನ್ಯ ಪೆಟ್ರೋಲ್‌ಗಳಲ್ಲಿ 91 ಆಕ್ಟೇನ್ ರೇಟಿಂಗ್ ಇರುತ್ತದೆ. ಪವರ್ ಪೆಟ್ರೋಲ್‌ಗಳಲ್ಲಿ 95 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಟೇನ್ ರೇಟಿಂಗ್ ಲಭ್ಯವಿರುತ್ತದೆ. ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಇಂಜಿನ್‌ಗಳಿಗೆ ಇದು ಉತ್ತಮ ಬೆಂಬಲ ನೀಡುತ್ತದೆ.

ಕೆಲವೊಮ್ಮೆ ಇಂಜಿನ್‌ನಲ್ಲಿ ಇಂಧನ ಮುಂಚಿತವಾಗಿ ಹೊತ್ತಿ ಉರಿಯುವುದರಿಂದ ‘ನಾಕಿಂಗ್’ ಎನ್ನುವ ಸಮಸ್ಯೆ ಉಂಟಾಗಬಹುದು. ಇದರಿಂದ ಇಂಜಿನ್‌ನ ಕಾರ್ಯಕ್ಷಮತೆ ಕುಗ್ಗುವ ಸಾಧ್ಯತೆ ಇರುತ್ತದೆ. ಪವರ್ ಪೆಟ್ರೋಲ್ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಹೈ-ಪರ್ಫಾರ್ಮೆನ್ಸ್ ವಾಹನಗಳಲ್ಲಿ ಇದರ ಲಾಭ ಹೆಚ್ಚು ಕಾಣಿಸುತ್ತದೆ.

ಇದರ ಜೊತೆಗೆ ಪವರ್ ಪೆಟ್ರೋಲ್‌ನಲ್ಲಿ ಕೆಲವು ವಿಶೇಷ ಕ್ಲೀನಿಂಗ್ ಅಡಿಟಿವ್‌ಗಳು ಮತ್ತು ಡಿಟರ್ಜೆಂಟ್‌ಗಳನ್ನು ಸೇರಿಸಲಾಗುತ್ತದೆ. ಇವು ಇಂಜಿನ್ ಒಳಭಾಗದಲ್ಲಿ ಕಾರ್ಬನ್ ಜಮೆಯಾಗುವುದನ್ನು ತಡೆಯಲು ನೆರವಾಗುತ್ತವೆ. ಇದರಿಂದ ಫ್ಯುಯೆಲ್ ಇಂಜೆಕ್ಟರ್‌ಗಳು ಮತ್ತು ವಾಲ್ವ್‌ಗಳು ಹೆಚ್ಚು ಸ್ವಚ್ಛವಾಗಿರುತ್ತವೆ.

ಪವರ್ ಪೆಟ್ರೋಲ್ ಬಳಸುವುದರಿಂದ ವಾಹನದ ಪಿಕಪ್ ಸುಧಾರಿಸಬಹುದು. ವೇಗ ಪಡೆಯುವ ಸಾಮರ್ಥ್ಯ ಸ್ವಲ್ಪ ಹೆಚ್ಚಾಗಬಹುದು. ಇಂಧನ ದಹನ ಉತ್ತಮವಾಗಿರುವುದರಿಂದ ಹೊರಬರುವ ಹಾನಿಕಾರಕ ಹೊಗೆ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದೆ.

ಆದರೆ ಸಾಮಾನ್ಯ ಕಮ್ಯೂಟರ್ ಬೈಕ್‌ಗಳು ಮತ್ತು ಬಜೆಟ್ ಕಾರುಗಳಿಗೆ ನಾರ್ಮಲ್ ಪೆಟ್ರೋಲ್ ಸಾಕಾಗುತ್ತದೆ. ಇಂತಹ ವಾಹನಗಳಲ್ಲಿ ಪವರ್ ಪೆಟ್ರೋಲ್ ಬಳಸಿದರೂ ಮೈಲೇಜ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸುವುದಿಲ್ಲ. ಹೀಗಾಗಿ ಹೆಚ್ಚುವರಿ ಹಣ ಖರ್ಚು ಮಾಡುವ ಅಗತ್ಯವೂ ಇರದೇ ಇರಬಹುದು.

ಮತ್ತೊಂದೆಡೆ, ಟರ್ಬೋಚಾರ್ಜ್ಡ್ ಕಾರುಗಳು, ಲಕ್ಸುರಿ ವಾಹನಗಳು, ಸ್ಪೋರ್ಟ್ಸ್ ಬೈಕ್‌ಗಳು ಹಾಗೂ ಹೈ-ಕಂಪ್ರೆಶನ್ ಇಂಜಿನ್ ಹೊಂದಿರುವ ವಾಹನಗಳಿಗೆ ಪವರ್ ಪೆಟ್ರೋಲ್ ಹೆಚ್ಚು ಸೂಕ್ತ. ಕೆಲವು ವಾಹನ ತಯಾರಕರು ತಮ್ಮ ಓನರ್ಸ್ ಮ್ಯಾನುಯಲ್‌ನಲ್ಲಿ ಪ್ರೀಮಿಯಂ ಇಂಧನ ಬಳಕೆಯನ್ನು ಕಡ್ಡಾಯವಾಗಿ ಸೂಚಿಸಿರುತ್ತಾರೆ.

ನಿಮ್ಮ ವಾಹನಕ್ಕೆ ಯಾವ ಪೆಟ್ರೋಲ್ ಸೂಕ್ತ ಎಂಬ ಮಾಹಿತಿ ವಾಹನದ ಓನರ್ಸ್ ಮ್ಯಾನುಯಲ್‌ನಲ್ಲಿ ಲಭ್ಯವಿರುತ್ತದೆ. ಅಲ್ಲಿ 95 RON ಅಥವಾ ಪ್ರೀಮಿಯಂ ಇಂಧನ ಬಳಕೆ ಸೂಚಿಸಿದ್ದರೆ ಮಾತ್ರ ಪವರ್ ಪೆಟ್ರೋಲ್ ಆಯ್ಕೆ ಮಾಡುವುದು ಉತ್ತಮ. ಇಲ್ಲವಾದರೆ ನಾರ್ಮಲ್ ಪೆಟ್ರೋಲ್‌ವೇ ಸಾಕಾಗುತ್ತದೆ. ಕೆಲ ತಜ್ಞರ ಪ್ರಕಾರ, ಇಂಜಿನ್ ಸ್ವಚ್ಛತೆ ಕಾಪಾಡಲು ಕೆಲವು ಟ್ಯಾಂಕ್ ನಾರ್ಮಲ್ ಪೆಟ್ರೋಲ್ ಬಳಕೆಯ ಬಳಿಕ ಒಮ್ಮೆ ಪವರ್ ಪೆಟ್ರೋಲ್ ಬಳಸಬಹುದು.

Related Stories