ಯುಎಇ, ದುಬೈ ಮತ್ತು ಅಬುಧಾಬಿ ನಡುವಿನ ವ್ಯತ್ಯಾಸ: ದೇಶ ಯಾವುದು? ನಗರ ಯಾವುದು? ಇಲ್ಲಿದೆ ಸ್ಪಷ್ಟ ವಿವರ
UAE vs Dubai vs Abu dubai: ಅರಬ್ ದೇಶಗಳ ಬಗ್ಗೆ ಮಾತನಾಡುವಾಗ ಅನೇಕರಿಗೆ ಯುಎಇ (UAE), ದುಬೈ ಮತ್ತು ಅಬುಧಾಬಿ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲವಿರುತ್ತದೆ. ಈ ಮೂರರ ನಡುವಿನ ವ್ಯತ್ಯಾಸ ಮತ್ತು ಅವುಗಳ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟ ಹಾಗೂ ಖಚಿತ ಮಾಹಿತಿ ಇಲ್ಲಿದೆ:
ಅರಬ್ ರಾಷ್ಟ್ರಗಳ ಬಗ್ಗೆ ಮಾತನಾಡುವಾಗ ಅನೇಕರು ದುಬೈ ಅಥವಾ ಅಬುಧಾಬಿಯನ್ನು ಪ್ರತ್ಯೇಕ ದೇಶಗಳೆಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇವೆಲ್ಲವೂ ಒಂದು ಒಕ್ಕೂಟ ವ್ಯವಸ್ಥೆಯ ಭಾಗವಾಗಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಯುಎಇ ಎಂಬುದು ಪಶ್ಚಿಮ ಏಷ್ಯಾದಲ್ಲಿರುವ ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿದೆ. ಈ ದೇಶವು ಏಳು ಸಣ್ಣ ಪ್ರಾಂತ್ಯಗಳ ಒಕ್ಕೂಟವಾಗಿದ್ದು, ಅವುಗಳನ್ನು ‘ಎಮಿರೇಟ್ಸ್’ ಎಂದು ಕರೆಯಲಾಗುತ್ತದೆ. ಇದರಲ್ಲಿ ದುಬೈ ಮತ್ತು ಅಬುದಾಭಿಗಳೂ ಸೇರಿವೆ.
ಯುಎಇ (UAE) ಎಂದರೇನು?
ಯುಎಇ ಅಂದರೆ ‘ಯುನೈಟೆಡ್ ಅರಬ್ ಎಮಿರೇಟ್ಸ್’. ಇದು ಪಶ್ಚಿಮ ಏಷ್ಯಾದಲ್ಲಿರುವ ಒಂದು ಸ್ವತಂತ್ರ ದೇಶ. 1971ರಲ್ಲಿ ಏಳು ಸಣ್ಣ ಪ್ರಾಂತ್ಯಗಳು (ಎಮಿರೇಟ್ಸ್) ಒಟ್ಟಾಗಿ ಸೇರಿ ಈ ಒಕ್ಕೂಟ ರಾಷ್ಟ್ರವನ್ನು ನಿರ್ಮಿಸಿಕೊಂಡವು. ಭಾರತದಲ್ಲಿ ಹೇಗೆ ರಾಜ್ಯಗಳಿವೆಯೋ, ಹಾಗೆಯೇ ಯುಎಇನಲ್ಲಿ ‘ಎಮಿರೇಟ್ಸ್’ಗಳಿವೆ.
ಈ ಏಳು ಪ್ರಾಂತ್ಯಗಳಲ್ಲಿ ಅಬುಧಾಬಿ ಎಂಬುದು ವಿಸ್ತೀರ್ಣದಲ್ಲಿ ಅತಿ ದೊಡ್ಡದಾಗಿದ್ದು, ಯುಎಇ ದೇಶದ ಅಧಿಕೃತ ರಾಜಧಾನಿಯಾಗಿದೆ. ಇದು ದೇಶದ ರಾಜಕೀಯ ಮತ್ತು ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಅಬುಧಾಬಿಯ ದೊರೆಯೇ ಸಾಮಾನ್ಯವಾಗಿ ಇಡೀ ಯುಎಇ ದೇಶದ ಅಧ್ಯಕ್ಷರಾಗಿರುತ್ತಾರೆ. ಇಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪಗಳಿರುವುದರಿಂದ ಇದು ದೇಶದ ಅತ್ಯಂತ ಶ್ರೀಮಂತ ಪ್ರಾಂತ್ಯವೂ ಹೌದು.
ಮತ್ತೊಂದೆಡೆ ದುಬೈ ಎಂಬುದು ಯುಎಇ ದೇಶದ ಒಳಗಿರುವ ಮತ್ತೊಂದು ಪ್ರಮುಖ ಪ್ರಾಂತ್ಯ ಮತ್ತು ಅಲ್ಲಿನ ಅತಿ ದೊಡ್ಡ ನಗರವಾಗಿದೆ. ದುಬೈ ಜಗತ್ತಿನಾದ್ಯಂತ ತನ್ನ ಪ್ರವಾಸೋದ್ಯಮ, ಗಗನಚುಂಬಿ ಕಟ್ಟಡಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ದುಬೈನಲ್ಲಿ ತೈಲಕ್ಕಿಂತ ಹೆಚ್ಚಾಗಿ ವ್ಯಾಪಾರ ಮತ್ತು ಆರ್ಥಿಕ ವಹಿವಾಟುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದುಬೈನ ದೊರೆ ಯುಎಇ ದೇಶದ ಪ್ರಧಾನ ಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದ ಈ 140 ಕೋಟಿಗೆ ಹಿಂದೆ ಮುಂದೆ ಯಾರೂ ಇಲ್ಲ! ಕರ್ನಾಟಕದ ಬ್ಯಾಂಕ್ಗಳಲ್ಲಿ ಕ್ಲೇಮ್ ಮಾಡದ ಹಣ 3,400 ಕೋಟಿ
ಈ ನಗರಗಳು ಹೇಗೆ ಸಂಪರ್ಕ ಹೊಂದಿವೆ ಎಂದರೆ, ಇಡೀ ಯುಎಇ ದೇಶಕ್ಕೆ ಒಂದೇ ರಾಷ್ಟ್ರಧ್ವಜ, ಒಂದೇ ಸಂವಿಧಾನ ಮತ್ತು ‘ದಿರ್ಹಾಮ್’ ಎಂಬ ಒಂದೇ ಕರೆನ್ಸಿ ಇದೆ. ಅಬುಧಾಬಿಯಿಂದ ದುಬೈ ನಗರಕ್ಕೆ ರಸ್ತೆಯ ಮೂಲಕ ಕೇವಲ ಒಂದೂವರೆ ಗಂಟೆಯಲ್ಲಿ ತಲುಪಬಹುದು. ಇವೆರಡೂ ಪ್ರಾಂತ್ಯಗಳ ಜೊತೆಗೆ ಷಾರ್ಜಾ, ಅಜ್ಮಾನ್ ಸೇರಿದಂತೆ ಇನ್ನೂ ಐದು ಪ್ರಾಂತ್ಯಗಳು ಒಟ್ಟಾಗಿ ಸೇರಿ ಯುಎಇ ಎಂಬ ರಾಷ್ಟ್ರವನ್ನು ಪ್ರತಿನಿಧಿಸುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಯುಎಇ ಎಂಬುದು ಭಾರತದಂತೆ ಒಂದು ದೇಶವಾದರೆ, ಅಬುಧಾಬಿ ಮತ್ತು ದುಬೈಗಳು ಅಲ್ಲಿನ ರಾಜ್ಯಗಳ ಅಥವಾ ಪ್ರಮುಖ ನಗರಗಳಂತೆ ಕಾರ್ಯನಿರ್ವಹಿಸುತ್ತವೆ. ಶಕ್ತಿಶಾಲಿ ಆಡಳಿತಕ್ಕಾಗಿ ಅಬುಧಾಬಿ ಹೆಸರುವಾಸಿಯಾಗಿದ್ದರೆ, ಜಾಗತಿಕ ಗ್ಲಾಮರ್ ಮತ್ತು ವ್ಯಾಪಾರಕ್ಕಾಗಿ ದುಬೈ ಪ್ರಸಿದ್ಧಿಯಾಗಿದೆ.



