ಉಡುಪಿ ಗ್ರಾಮ ಪಂಚಾಯ್ತಿ ಮಾದರಿ ಭವಿಷ್ಯ ನಿಧಿ ಜಾರಿಗೆ ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಭವಿಷ್ಯ ನಿಧಿ ಯೋಜನೆ ಅನುಷ್ಠಾನದ ಕುರಿತಂತೆ ರಾಜ್ಯ ಸರ್ಕಾರ ಖಡಕ್ ಆದೇಶ ನೀಡಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಭವಿಷ್ಯ ನಿಧಿ ಸೌಲಭ್ಯ ಒದಗಿಸುವಂತೆ 2008ರಲ್ಲೇ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಆದರೆ ಇನ್ನೂ ಸಿಬ್ಬಂದಿಗೆ ಭವಿಷ್ಯ ನಿಧಿ ಯೋಜನೆ ತಲುಪಿಸದ ಗ್ರಾಮ ಪಂಚಾಯ್ತಿಗಳಿಗೆ ಮಹತ್ವದ ಆದೇಶ ಹೊರಡಿಸಲಾಗಿದೆ.
ಉಡುಪಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾತ್ರ ಸಂಪೂರ್ಣವಾಗಿ ಭವಿಷ್ಯ ನಿಧಿ ಯೋಜನೆ ಜಾರಿಗೆ ಬಂದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಭಾಗಶಃ ಜಾರಿಗೆ ಬಂದಿದೆ. ಇನ್ನುಳಿದಂತೆ ರಾಜ್ಯದ ಇನ್ನಿತರ ಯಾವುದೇ ಜಿಲ್ಲೆಗಳಲ್ಲಿ ಭವಿಷ್ಯ ನಿಧಿ ಯೋಜನೆ ಜಾರಿಗೆ ಬಾರದ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಹೀಗಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳು ಉಡುಪಿ ಮಾದರಿಯನ್ನು ಅನುಸರಿಸಬೇಕಿದೆ.
ಇದನ್ನೂ ಓದಿ: ಯು.ಟಿ ಖಾದರ್ ಸಿಎಂ ಆಗಬೇಕೆಂದ ಬಿಜೆಪಿ ಶಾಸಕ ಸುರೇಶ್ ಶೆಟ್ಟಿ : ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಿ , ಜಿಲ್ಲಾ ಪಂಚಾಯತಗಳು ಮೇಲ್ವಿಚಾರಣೆ ವಹಿಸಬೇಕು ಎಂದು ಆದೇಶ ಪ್ರತಿಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ. ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಆರೋಗ್ಯ ಭದ್ರತೆ, ನಿವೃತ್ತಿ ಭದ್ರತೆ, ಆರ್ಥಿಕ ಭದ್ರತೆ ಒದಗಿಸುವ ಪಿಂಚಣಿ ಯೋಜನೆಯ ಅನುಷ್ಠಾನದ ಕಡೆಗೆ ಎಲ್ಲಾ ಜಿಲ್ಲೆಗಳ ಗ್ರಾಮ ಪಂಚಾಯ್ತಿಗಳು ಗಂಭೀರವಾಗಿ ಗಮನ ಹರಿಸಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ಹೊರಡಿಸಿದೆ.



