ಪಾಕ್ ನೆಲದಿಂದ ಭಾರತಕ್ಕೆ ಬೆಂಬಲ! ಜೈಶಂಕರ್ಗೆ ಶ್ಲಾಘನೆ-ಸಹಾಯ ಕೋರಿ ಪತ್ರ
Mir Yar Baloch: ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಲು ಸಜ್ಜಾಗುತ್ತಿದೆ ಎಂದು ಬಲೋಚ್ ಹಿರಿಯ ಮುಖಂಡ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಮೀರ್ ಯಾರ್ ಬಲೋಚ್ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮುಕ್ತ ಪತ್ರ ಬರೆದಿರುವ ಅವರು, ಪಾಕಿಸ್ತಾನ ಮತ್ತು ಚೀನಾ ನಡುವೆ ಬೆಳೆಯುತ್ತಿರುವ ಅಪಾಯಕಾರಿ ಮೈತ್ರಿಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವನ್ನು ಎಚ್ಚರಿಸಿದ್ದಾರೆ.
ಮುಂಬರುವ ಕೆಲವೇ ತಿಂಗಳುಗಳಲ್ಲಿ ಬಲೂಚಿಸ್ತಾನದ ನೆಲದಲ್ಲಿ ಚೀನಾ ಸೇನೆ ಮೊಕ್ಕಾಂ ಹೂಡುವ ಸಾಧ್ಯತೆಯಿದೆ ಎಂದು ಮೀರ್ ಯಾರ್ ಬಲೋಚ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಆಡಳಿತದಲ್ಲಿ ಬಲೂಚಿಸ್ತಾನವು ದಶಕಗಳಿಂದ ದಮನಕಾರಿ ನೀತಿಯನ್ನು ಎದುರಿಸುತ್ತಾ ಬಂದಿದೆ. ಅಲ್ಲಿನ ಜನರ ಮೇಲೆ ರಾಜ್ಯ ಪ್ರಾಯೋಜಿತ ಹಿಂಸಾಚಾರ ನಡೆಯುತ್ತಿದ್ದು, ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಲೂಚ್ ಜನರ ಧ್ವನಿಯನ್ನು ಹತ್ತಿಕ್ಕಲು ಪಾಕಿಸ್ತಾನವು ಈಗ ಚೀನಾದ ಬೆಂಬಲ ಪಡೆಯುತ್ತಿರುವುದು ಪ್ರಾದೇಶಿಕ ಭದ್ರತೆಗೆ ದೊಡ್ಡ ಆಪತ್ತನ್ನು ತಂದೊಡ್ಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಮೂಲದ ಉದ್ಯಮಿಯಿಂದ ಹೊಸ ವಿಮಾನಯಾನ ಸಂಸ್ಥೆ ‘ಸ್ಕ್ಯಾನ್ಜೆಟ್’: ಮೈಸೂರಿನಿಂದ ಹಾರಾಟ ಆರಂಭ
ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳ ಲೂಟಿ ಮತ್ತು ಸ್ಥಳೀಯರ ಮೇಲಿನ ನಿರಂತರ ದೌರ್ಜನ್ಯಗಳ ಬಗ್ಗೆ ಜೈಶಂಕರ್ ಅವರ ಗಮನ ಸೆಳೆದಿರುವ ಬಲೋಚ್ ನಾಯಕ, ಚೀನಾ ಸೇನೆಯ ಪ್ರವೇಶವು ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಲಿದೆ ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತವು ಬಲೂಚ್ ಜನರ ಪರವಾಗಿ ನಿಂತು ಅವರಿಗೆ ಅಚಲ ಬೆಂಬಲ ನೀಡಬೇಕು ಮತ್ತು ಈ ಮಾನವೀಯ ಬಿಕ್ಕಟ್ಟಿನ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ದನಿ ಎತ್ತಬೇಕು ಎಂದು ಅವರು ಭಾರತದ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದಾರೆ.



