ಅಮೇರಿಕಾ vs ಯೂರೋಪ್: ಯುಎಸ್ ದಾದಾಗಿರಿಗೆ ಗ್ರೀನ್‌ಲ್ಯಾಂಡ್‌ಲ್ಲಿ ನಡುಕ!
America vs Europe | NATO Alliance: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಅಪಹರಣ ಮತ್ತು ಆ ದೇಶದ ಮೇಲಿನ ಅಮೇರಿಕಾದ ದಿಢೀರ್ ದಾಳಿಯು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ (US President Donald Trump) ಮುಂದಿನ ಗುರಿ ‘ಗ್ರೀನ್‌ಲ್ಯಾಂಡ್’ (Greenland) ಎಂಬ ಆತಂಕ ಈಗ ಯೂರೋಪ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿದೆ.
ಒಂದು ಪದ, ಸಾವಿರ ಆತಂಕ
ಟ್ರಂಪ್ ಅವರ ಆಪ್ತ ಸಹಾಯಕ ಸ್ಟೀಫನ್ ಮಿಲ್ಲರ್ ಅವರ ಪತ್ನಿ ಕೇಟೀ ಮಿಲ್ಲರ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಬೆಂಕಿಗೆ ತುಪ್ಪ ಸುರಿದಂತಿದೆ. ಅಮೇರಿಕಾದ ಧ್ವಜದ ಬಣ್ಣದಲ್ಲಿರುವ ಗ್ರೀನ್‌ಲ್ಯಾಂಡ್ ನಕ್ಷೆಯನ್ನು ಹಾಕಿ, ಅದಕ್ಕೆ “Soon” (ಶೀಘ್ರದಲ್ಲೇ) ಎಂಬ ಶೀರ್ಷಿಕೆ ನೀಡಿದ್ದಾರೆ. ಇದು ಕೇವಲ ಸಾಮಾಜಿಕ ಜಾಲತಾಣದ ಪೋಸ್ಟ್ ಆಗಿರದೆ, ಅಮೇರಿಕಾದ ಆಕ್ರಮಣಕಾರಿ ವಿಸ್ತರಣಾವಾದದ ಮುನ್ಸೂಚನೆ ಎಂದು ಯೂರೋಪ್ ಪರಿಗಣಿಸಿದೆ.
ವೆನೆಜುವೆಲಾ ಮಾದರಿಯೇ ಗ್ರೀನ್‌ಲ್ಯಾಂಡ್‌ಗೂ?
ವೆನೆಜುವೆಲಾದಲ್ಲಿ ಮಡುರೋ ದಂಪತಿಯನ್ನು ಅಮೇರಿಕಾ ಪಡೆಗಳು ಸೆರೆಹಿಡಿದ ರೀತಿಯೇ, ಗ್ರೀನ್‌ಲ್ಯಾಂಡ್ ಅನ್ನು ಕೂಡ ಬಲವಂತವಾಗಿ ವಶಪಡಿಸಿಕೊಳ್ಳುವ ಆತಂಕ ಎದುರಾಗಿದೆ. ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ನಾಯಕರು ಇದನ್ನು “ಅಸಂಬದ್ಧ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ” ಎಂದು ಕಿಡಿಕಾರಿದ್ದಾರೆ. “ಗ್ರೀನ್‌ಲ್ಯಾಂಡ್ ತನ್ನ ಜನರಿಗೆ ಸೇರಿದ್ದು, ಅದು ಮಾರಾಟಕ್ಕಿಲ್ಲ” ಎಂದು ಯೂರೋಪಿಯನ್ ನಾಯಕರು ಒಕ್ಕೊರಲಿನಿಂದ ಸಾರಿದ್ದಾರೆ.
ನ್ಯಾಟೋ (NATO) ಅಸ್ತಿತ್ವಕ್ಕೆ ಸವಾಲು
ಈ ಸಂಘರ್ಷದ ಅತ್ಯಂತ ಭೀಕರ ಆಯಾಮವೆಂದರೆ ಅದು ನ್ಯಾಟೋ ಮೈತ್ರಿಕೂಟದ ಸಂಭಾವ್ಯ ಅಂತ್ಯ.
ಆರ್ಟಿಕಲ್ ೫ (Article 5): ನಾಟೋ ನಿಯಮದಂತೆ, ಒಂದು ಸದಸ್ಯ ರಾಷ್ಟ್ರದ ಮೇಲೆ ದಾಳಿಯಾದರೆ ಅದು ಇಡೀ ಒಕ್ಕೂಟದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
ಅಮೇರಿಕಾ ಮತ್ತು ಡೆನ್ಮಾರ್ಕ್ ಎರಡೂ ನಾಟೋ ಸದಸ್ಯ ರಾಷ್ಟ್ರಗಳು. ಒಂದು ವೇಳೆ ಅಮೇರಿಕಾ ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾದರೆ, ಅದು ತನ್ನದೇ ಮಿತ್ರರಾಷ್ಟ್ರದ ಮೇಲೆ ಯುದ್ಧ ಸಾರಿದಂತಾಗುತ್ತದೆ. ಇದು ದಶಕಗಳ ಕಾಲದ ಪಾಶ್ಚಿಮಾತ್ಯ ಭದ್ರತಾ ಒಪ್ಪಂದವನ್ನು ಧೂಳೀಪಟ ಮಾಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಕ್ಷಣೆ ಮತ್ತು ಆರ್ಥಿಕತೆಯ ನೆಪ
ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು “ರಾಷ್ಟ್ರೀಯ ಭದ್ರತೆ” ಮತ್ತು “ಆಯಕಟ್ಟಿನ ಪ್ರಾಮುಖ್ಯತೆ”ಯ ಕಾರಣ ನೀಡಿ ವಶಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವ ತಡೆಯಲು ಇದು ಅಗತ್ಯ ಎಂದು ಅವರು ವಾದಿಸುತ್ತಿದ್ದಾರೆ. ಆದರೆ ಯೂರೋಪ್ ಇದನ್ನು ‘ನವ ಸಾಮ್ರಾಜ್ಯಶಾಹಿ’ ಧೋರಣೆ ಎಂದು ಕರೆದಿದೆ.
ವೆನೆಜುವೆಲಾ ಘಟನೆಯ ನಂತರ ಅಮೇರಿಕಾ ಈಗ ಜಾಗತಿಕ ‘ದಾದಾಗಿರಿ’ಗೆ ಇಳಿದಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಒಂದೆಡೆ ಅಮೇರಿಕಾದ ಸೇನಾ ಶಕ್ತಿ ಮತ್ತು ಹಠವಾದಿ ನಾಯಕತ್ವ, ಇನ್ನೊಂದೆಡೆ ತನ್ನ ಸಾರ್ವಭೌಮತೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಯೂರೋಪ್ – ಈ ಎರಡು ಶಕ್ತಿಗಳ ನಡುವಿನ ಸಂಘರ್ಷ ಈಗ ಗ್ರೀನ್‌ಲ್ಯಾಂಡ್ ಎಂಬ ಹಿಮದ ದ್ವೀಪದಲ್ಲಿ ಬಿಸಿಯೇರುತ್ತಿದೆ.



