ಐಸಿಸ್‌ ಉಗ್ರರ ಮೇಲೆ ಅಮೇರಿಕಾದಿಂದ ಭೀಕರ ಬಾಂಬ್ ದಾಳಿ

America bomb attack on ISIS Terrorists: ಸಿರಿಯಾ: ಸಿರಿಯಾದಲ್ಲಿ ಬೀಡುಬಿಟ್ಟಿರುವ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪುಗಳ ವಿರುದ್ಧ ಅಮೆರಿಕ ಸೇನೆಯು ಶನಿವಾರ ಭೀಕರ ವೈಮಾನಿಕ ದಾಳಿಗಳನ್ನು ನಡೆಸಿದೆ. ಕಳೆದ ತಿಂಗಳು ಅಮೆರಿಕದ ಸೈನಿಕರು ಹಾಗೂ ಓರ್ವ ನಾಗರಿಕನನ್ನು ಉಗ್ರರು ಹತ್ಯೆಗೈದ ಘಟನೆಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸ್ಪಷ್ಟಪಡಿಸಿದೆ.

ಕಳೆದ ಡಿಸೆಂಬರ್ 13 ರಂದು ಇಸಿಸ್ ಉಗ್ರರು ನಡೆಸಿದ ದಾಳಿಯಲ್ಲಿ ಅಮೆರಿಕದ ಇಬ್ಬರು ಸೈನಿಕರು ಮತ್ತು ಒಬ್ಬ ನಾಗರಿಕ ಭಾಷಾಂತರಕಾರ ಕೊಲ್ಲಲ್ಪಟ್ಟಿದ್ದರು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ವಾಷಿಂಗ್ಟನ್, ಡಿಸೆಂಬರ್‌ನಿಂದಲೇ ಸಿರಿಯಾದಲ್ಲಿ ಉಗ್ರರ ನಿರ್ಮೂಲನೆಗಾಗಿ ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಅದರ ಮುಂದುವರಿದ ಭಾಗವಾಗಿ ಶನಿವಾರ ಮಧ್ಯಾಹ್ನ ಸಿರಿಯಾದಾದ್ಯಂತ ಇರುವ ಉಗ್ರರ ಗುಪ್ತ ನೆಲೆಗಳನ್ನು ಗುರಿಯಾಗಿಸಿಕೊಂಡು ಯುದ್ಧ ವಿಮಾನಗಳು ಬಾಂಬ್ ಮಳೆಯನ್ನು ಸುರಿಸಿವೆ.

ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣುಮಕ್ಕಳ ಬಾಳು ಬಂಗಾರವಾಗಲು ಹೀಗೆ ಮಾಡಿ

ಸಿರಿಯಾದ ಭದ್ರತಾ ಪಡೆಗಳ ಸಹಯೋಗದೊಂದಿಗೆ ಅಮೆರಿಕ ನೇತೃತ್ವದ ಒಕ್ಕೂಟ ಪಡೆಗಳು ಕಳೆದ ಕೆಲವು ತಿಂಗಳುಗಳಿಂದ ಸಿರಿಯಾದಲ್ಲಿ ಸಕ್ರಿಯವಾಗಿವೆ. ಸಂಶಯಾಸ್ಪದ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿರಂತರ ಕಣ್ಣಿಟ್ಟಿರುವ ಈ ಪಡೆಗಳು, ಭೂಮಿಯ ಮೇಲಿನ ದಾಳಿ ಹಾಗೂ ವೈಮಾನಿಕ ದಾಳಿಗಳ ಮೂಲಕ ಐಸಿಸ್ ಜಾಲವನ್ನು ಧ್ವಂಸ ಮಾಡುತ್ತಿವೆ. ಶನಿವಾರದ ದಾಳಿಯು ಉಗ್ರರ ಬೆನ್ನೆಲುಬು ಮುರಿಯುವ ಉದ್ದೇಶವನ್ನು ಹೊಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್, “ಸಿರಿಯಾದಾದ್ಯಂತ ಹರಡಿರುವ ಐಸಿಸ್ ಉಗ್ರರ ಅಡಗುತಾಣಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಅಮೆರಿಕದ ಸಿಬ್ಬಂದಿಗಳ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ನೀಡಿದೆ” ಎಂದು ಹೇಳಿದೆ. ಈ ದಾಳಿಯಲ್ಲಿ ಉಂಟಾದ ಸಾವು-ನೋವುಗಳ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories