ಬಿಜೆಪಿ ಮಾಜಿ ಮುಖಂಡನ ಪುತ್ರನ ಲವ್ ಸೆಕ್ಸ್ ದೋಖಾ ಪ್ರಕರಣ : ಕೊನೆಗೂ ಸಂತ್ರಸ್ತೆಯೊಂದಿಗೆ ವಿವಾಹಕ್ಕೆ ಕೃಷ್ಣ ಸಮ್ಮತಿ
ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸರಾವ್ ಪುತ್ರನ ಕೃಷ್ಣ ಜೆ. ರಾವ್ನ ವಂಚನೆ ಪ್ರಕರಣ ಇದೀಗ ತಾರ್ಕಿಕ ಅಂತ್ಯಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸಂತ್ರಸ್ತೆಯನ್ನು ಮತ್ತೊಮ್ಮೆ ಸಂಧಾನಕ್ಕೆ ಕರೆದ ಕೃಷ್ಣ ಜೆ. ರಾವ್ ಕುಟುಂಬಸ್ಥರು ಮದುವೆಯಾಗಲು ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಮಗುವಿನ ನಾಮಕರಣ ಶಾಸ್ತ್ರ ಕಲ್ಲಡ್ಕದಲ್ಲಿ ಅದ್ಧೂರಿಯಾಗಿ ನಡೆಸುವ ಎಚ್ಚರಿಕೆಯ ಬೆನ್ನಲ್ಲೇ ಇದೀಗ ಕೃಷ್ಣ ಕುಟುಂಬ ಮದುವೆಯ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಮದುವೆಯಾಗಬೇಕು ಎಂದರೆ ಸಂತ್ರಸ್ತೆ ಕುಟುಂಬಸ್ಥರು ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯ ಎಂದು ಕೃಷ್ಣ ಕುಟುಂಬಸ್ಥರು ಹೇಳಿದ್ದಾರೆ. ಆ ಷರತ್ತುಗಳು ಯಾವುದು ಅನ್ನೋದನ್ನ ನೋಡುವುದಾದರೆ:
1. ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಳ್ಳಬಾರದು.
2. ಕುಟುಂಬದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಬಾರದು.
3. ಕಲ್ಲಡ್ಕದಲ್ಲಿ ಆಯೋಜಿಸಿದ ಮಗುವಿನ ನಾಮಕರಣ ಕಾರ್ಯಕ್ರಮ ಕೈ ಬಿಡಬೇಕು.
4. ಸಂಧಾನಕ್ಕೆ ಸಂತ್ರಸ್ತ ಯುವತಿ ಮತ್ತು ಆಕೆಯ ತಾಯಿ ಮಾತ್ರ ಬರಬೇಕು ಎಂದು ಸೂಚನೆ ನೀಡಲಾಗಿದೆ.
ಅದರಂತೆಯೇ ಮೇಲಿನ ಎಲ್ಲಾ ಷರತ್ತುಗಳಿಗೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ಷರತ್ತುಗಳನ್ನು ಪಾಲಿಸಿದ ಪ್ರತಿಯಾಗಿ ಜನವರಿ 31ರ ಒಳಗಾಗಿ ಕಾನೂನು ಪ್ರಕಾರವೇ ಮದುವೆ ಮಾಡಿಕೊಡಬೇಕು ಎಂದು ಸಂತ್ರಸ್ತೆ ಪರ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾರ್ಕಳ : ಕೋಳಿ ಅಂಕದ ಮೇಲೆ ದಾಳಿ, ಲಕ್ಷಾಂತರ ಮೌಲ್ಯದ ಸ್ವತ್ತು ವಶಕ್ಕೆ
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಸದಸ್ಯೆ ಪ್ರತಿಭಾ ಕುಳಾಯಿ, ಸಂಧಾನ ಮಾತುಕತೆಯನ್ನು ಇವರು ಪೊಲೀಸ್ ಠಾಣೆ ಅಥವಾ ಎಸ್ಪಿ ಕಚೇರಿಗಳಲ್ಲೇ ಮಾಡಬೇಕು. ಅಲ್ಲದೇ ಜನವರಿ 31ರ ಒಳಗಾಗಿ ಮದುವೆ ಕಾರ್ಯ ಪೂರ್ಣಗೊಳ್ಳಬೇಕು. ಇದು ಕೊನೆಯ ಸಂಧಾನ. ಇದಾದ ಬಳಿಕ ಯಾವುದೇ ಮಾತುಕತೆಗೆ ನಾವು ಬರುವುದಿಲ್ಲ. ಜನವರಿ 31ರಂದು ಇವರ ಮದುವೆ ನಡೆಯಲಿಲ್ಲ ಎಂದಾದರೆ ಫೆಬ್ರವರಿ 7ರಂದು ಕಲ್ಲಡ್ಕದಲ್ಲಿ ಯುವತಿ ಕುಟುಂಬಸ್ಥರ ಜೊತೆ ಸೇರಿ ಹೋರಾಟ ಆರಂಭಿಸುತ್ತೇವೆ. RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಊರಿನಲ್ಲೇ ಹೋರಾಟ ಆರಂಭಿಸುತ್ತೇವೆ. ಕಲ್ಲಡ್ಕದಲ್ಲಿ ಫೆಬ್ರವರಿ 7ರಂದು ಮಗುವಿನ ನಾಮಕರಣದೊಂದಿಗೆ ನಮ್ಮ ಹೋರಾಟ ಆರಂಭಗೊಳ್ಳುತ್ತದೆ ಎಂದು ಕೃಷ್ಣ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.



