ಕಾರ್ಕಳ : ಕೋಳಿ ಅಂಕದ ಮೇಲೆ ದಾಳಿ, ಲಕ್ಷಾಂತರ ಮೌಲ್ಯದ ಸ್ವತ್ತು ವಶಕ್ಕೆ
ಕಾರ್ಕಳ: ವ್ಯಕ್ತಿಯೊಬ್ಬರು ತಮ್ಮ ತೋಟದಲ್ಲಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಘಟನೆಯು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.
ಮೊದಲ ಆರೋಪಿಯನ್ನು ಬಂಗರಗೋಡಿ ನಿವಾಸಿ ಉದಯ ಶೆಟ್ಟಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ತನ್ನ ಅಡಿಕೆ ತೋಟದಲ್ಲಿ ಶಾಮಿಯಾನ ಹಾಕಿ ಸಾರ್ವಜನಿಕರನ್ನು ಆಹ್ವಾನಿಸಿ ಕೋಳಿ ಅಂಕ ನಡೆಸಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಹಣವಿಟ್ಟು ಕೋಳಿ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮೀಣ ಠಾಣಾ ಪಿಎಸ್ಐ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಉದಯ ಶೆಟ್ಟಿ, ಶಿರ್ವ ಗ್ರಾಮದ ಸತೀಶ್ , ರವಿ, ಸ್ಟೀಫನ್ ಹಾಗೂ ಮುಲ್ಕಿ ಕೊಡಮಾಲ ಗ್ರಾಮದ ಅಡಿಗಪ್ಪ, ಉದ್ಯಾವರದ ಅಪ್ಪು ಹಾಗೂ ಸಂದೀಪ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ನಾಯಿಮರಿ ಮೇಲೆ ಅತ್ಯಾಚಾರ ಎಸಗಿದ ಯುವಕ; ನಾಯಿಮರಿಯ ಸ್ಥಿತಿ ಗಂಭೀರ
ಇನ್ನು ಆರೋಪಿಗಳಿಂದ ಕೋಳಿ ಕಾದಾಟಕ್ಕೆ ಬಳಸಲಾದ ಹುಂಜಗಳು, 2 ಕತ್ತಿಗಳು, 4 ಹುಂಜಗಳ ಕಾಲಿಗೆ ಕಟ್ಟುವ ಹಗ್ಗ, 4,500 ರೂಪಾಯಿ ನಗದು,2.5 ಲಕ್ಷ ರೂಪಾಯಿ ಮೌಲ್ಯದ ಕಾರು, 2 ಶಾಮಿಯಾನ, 4 ಶಾಮಿಯಾನ ಕಂಬ, 4 ಸ್ಟೀಲಿನ ಟೇಬಲ್ , 25 ಪ್ಲಾಸ್ಟಿಕ್ ಕುರ್ಚಿಗಳನ್ನು ವಶಕ್ಕೆ ಪಡೆಯಲಾಗಿದೆ.



