ಉಡುಪಿಯಲ್ಲಿ ಪ್ರವಾಸಿ ಬೋಟು ದುರಂತ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಯುವತಿ ಸಾ*ವು
ಉಡುಪಿ: ಉಡುಪಿಯ ಮಲ್ಪೆ ಡೆಲ್ಟಾ ಬೀಚ್ ಸಮೀಪದ ನದಿ–ಸಮುದ್ರ ಸಂಗಮ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಪ್ರವಾಸಿ ದೋಣಿ ದುರಂತ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ಯುವತಿ ಸಾವನ್ನಪ್ಪಿದ್ದು , ಘಟನೆಯಲ್ಲಿ ಮೃತರ ಸಂಖ್ಯೆ ಮೂರಕ್ಕೆ ಏರಿದೆ. ಮೈಸೂರಿನ ಉದಯಗಿರಿಯ ಜಲಾಪುರಿ ನಿವಾಸಿ ದಿಶಾ(23) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ಧರ್ಮ ರಾಜ್ ಎಂಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ. ಈ ದುರಂತದಲ್ಲಿ ನಿನ್ನೆ ಸಿಂಧು ಹಾಗೂ ಶಂಕರಪ್ಪ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಉಡುಪಿ: ಮಲ್ಪೆ ಸಮೀಪ ಪ್ರವಾಸಿ ದೋಣಿ ಉರುಳಿ ಇಬ್ಬರು ಸಾ*ವು
ಘಟನೆ ಏನು?
ಮೈಸೂರಿನ ಬಿಪಿಓ ಒಂದರಲ್ಲಿ ಕೆಲಸ ಮಾಡುತ್ತಿದ್ದ 28 ಮಂದಿ ಉದ್ಯೋಗಿಗಳು ಪ್ರವಾಸಕ್ಕೆಂದು ಉಡುಪಿಯ ಮಲ್ಪೆ ಡೆಲ್ಟಾ ಬೀಚ್ಗೆ ತೆರೆಳಿದ್ದರು. ವಿಹಾರಕ್ಕೆಂದು ಎರಡು ಪ್ರತ್ಯೇಕ ಟೂರಿಸ್ಟ್ ಬೋಟ್ ಗಳಲ್ಲಿ ತಲಾ 14 ಮಂದಿ ಯುವಕ ಯುವತಿಯರು ತೆರಳಿದ್ದರು. ಅದರಲ್ಲಿ ಒಂದು ಬೋಟ್ ಮುಗುಚಿ 14 ಮಂದಿ ಸಮುದ್ರಪಾಲಾಗಿದ್ದರು. ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ತಕ್ಷಣ ಕಾರ್ಯಾಚರಣೆ ನಡೆಸಿ ಹಲವರನ್ನು ಬದುಕಿಸಿದ್ದರು. ಆದರೆ ನಾಲ್ಕು ಪ್ರವಾಸಿಗರ ಸ್ಥಿತಿ ಗಂಭೀರವಾಗಿತ್ತು. ಅವರಲ್ಲಿ ಇಬ್ಬರು ನಿನ್ನೆ ಮೃತಪಟ್ಟಿದ್ದರು. ಆದರೆ ಇಂದು ಮತ್ತೋರ್ವ ಯುವತಿ ದಿಶಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



