ಡೊನಾಲ್ಡ್ ಟ್ರಂಪ್‌ಗೆ ಬಹುದೊಡ್ಡ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ!
PM Modi | Donald Trump | Tarif Cut: ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಉತ್ಪನ್ನಗಳ ಮೇಲಿದ್ದ ಆಮದು ಸುಂಕವನ್ನು (Tariff) ಶೇಕಡಾ 25 ರಿಂದ ಶೇಕಡಾ 18ಕ್ಕೆ ಇಳಿಕೆ ಮಾಡಿದ್ದಾರೆ. ಈ ಮಹತ್ವದ ನಿರ್ಧಾರವನ್ನು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದನ್ನು “ಐತಿಹಾಸಿಕ ವ್ಯಾಪಾರ ಒಪ್ಪಂದ” ಎಂದು ಬಣ್ಣಿಸಿದ್ದಾರೆ. ಈ ನಿರ್ಧಾರದಿಂದ ಭಾರತದ ರಫ್ತುದಾರರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.
ಪ್ರಧಾನಿ ಮೋದಿ ಅಭಿನಂದನೆ
ಈ ಘೋಷಣೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ್ದಾರೆ. “140 ಕೋಟಿ ಭಾರತೀಯರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ದೊಡ್ಡ ಧನ್ಯವಾದಗಳು. ಎರಡು ದೊಡ್ಡ ಆರ್ಥಿಕತೆಗಳು ಮತ್ತು ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಿದರೆ, ಅದು ಎರಡೂ ದೇಶಗಳ ಜನರಿಗೆ ಅಪಾರ ಅವಕಾಶಗಳನ್ನು ತೆರೆದಿಡುತ್ತದೆ,” ಎಂದು ಮೋದಿ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಷ್ಯಾ ತೈಲ ಖರೀದಿ ಮತ್ತು ಸುಂಕದ ಇತಿಹಾಸ
ಕಳೆದ ವರ್ಷ ಅಮೆರಿಕವು ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿತ್ತು. ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ ಈಗಿನ ಒಪ್ಪಂದದ ಪ್ರಕಾರ, ಭಾರತವು ರಷ್ಯಾದ ತೈಲ ಆಮದನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಸುಂಕವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಸಚಿವ ಲಕ್ಷ್ಮೀ ಹೆಬ್ಬಾಳಕರ್
ಭಾರತಕ್ಕೆ ಸಿಕ್ಕ ಲಾಭವೇನು?
ಈ ಹೊಸ ಒಪ್ಪಂದದಿಂದಾಗಿ ಅಮೆರಿಕದ ಮಾರುಕಟ್ಟೆಯಲ್ಲಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳು ಅಗ್ಗವಾಗಲಿವೆ. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗಿಂತ ಭಾರತಕ್ಕೆ ಕಡಿಮೆ ಸುಂಕದ ಸೌಲಭ್ಯ ಸಿಕ್ಕಂತಾಗಿದ್ದು, ಜಾಗತಿಕ ವ್ಯಾಪಾರದಲ್ಲಿ ಭಾರತಕ್ಕೆ ದೊಡ್ಡ ಸ್ಪರ್ಧಾತ್ಮಕ ಲಾಭ ಸಿಕ್ಕಿದೆ. ಇದು ಭಾರತದ ಆರ್ಥಿಕತೆಗೆ ಮತ್ತು ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ನೀಡಲಿದೆ.
ಷೇರು ಮಾರುಕಟ್ಟೆಯಲ್ಲಿ ಸಂಭ್ರಮ
ಭಾರತ ಮತ್ತು ಅಮೆರಿಕ ನಡುವಿನ ಈ ವ್ಯಾಪಾರ ಒಪ್ಪಂದದ ಸುದ್ಧಿ ಹೊರಬೀಳುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಅಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಗಣನೀಯವಾಗಿ ಚೇತರಿಸಿಕೊಂಡಿದೆ.



