ರಾಜಧಾನಿ ಮರಣ ಮಳೆಗೆ 7 ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮಳೆಯ ತೀವ್ರತೆಗೆ ಎಮೆರ್ಜೆನ್ಸಿ ವಿಭಾಗದ ಕಾಂಪೌಂಡ್ ಕುಸಿದಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಇನ್ನೂ ಜನರು ಸಿಲುಕಿರುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಕೂಡ ಇದೆ.
ಬೆಂಗಳೂರು : ಬಿಸಿಲ ಧಗೆಯಿಂದ ಬಳಲುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಇಂದು ವರುಣ ತಂಪೆರಿದ್ದಾನೆ. ಆದರೆ ಇದರ ಜೊತೆಯಲ್ಲಿ ಬೆಂಗಳೂರಿನಲ್ಲಿ ಮಹಾನ್ ದುರಂತ ಕೂಡ ಸಂಭವಿಸಿದೆ. ಕೇವಲ ಅರ್ಧಗಂಟೆಗಳ ಕಾಲ ಸುರಿದ ಆಲೆಕಲ್ಲು ಸಹಿತ ಮಳೆಗೆ ಬರೋಬ್ಬರಿ 8 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮಳೆಯ ತೀವ್ರತೆಗೆ ಎಮೆರ್ಜೆನ್ಸಿ ವಿಭಾಗದ ಕಾಂಪೌಂಡ್ ಕುಸಿದಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಇನ್ನೂ ಜನರು ಸಿಲುಕಿರುವ ಸಾಧ್ಯತೆಯಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಕೂಡ ಇದೆ.
ಇನ್ನು ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೌರಿಂಗ್ ಆಸ್ಪತ್ರೆಯ ಹೊರ ಭಾಗದಲ್ಲಿ ಫುಟ್ಪಾತ್ನಲ್ಲಿ ಇವರೆಲ್ಲ ವಿವಿಧ ವ್ಯಾಪಾರಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ಏಕಾಏಕಿ ಕಾಂಪೌಂಡ್ ಕುಸಿದಿದ್ದು 7 ಮಂದಿ ಸಾವನ್ನಪ್ಪಿದ್ದಾರೆ.ಮೃತರ ಪೈಕಿ 5 ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಎನ್ನಲಾಗಿದೆ. ವ್ಯಾಪಾರಿಗಳ ಜೊತೆ ಅವಶೇಷಗಳಡಿಯಲ್ಲಿ ಪಾದಚಾರಿಗಳೂ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಅವಶೇಷ ತೆರವು ಕಾರ್ಯ ಮುಂದುವರಿದಿದೆ.
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಸರ್ಕಾರದಿಂದ ಚಿಕಿತ್ಸೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಉಡುಪಿ: ತ್ರಾಸಿ ಬಳಿ ಪ್ರವಾಸಿ ಬಸ್ -ಟ್ಯಾಂಕರ್ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳ ಸಾವು, ಹಲವರಿಗೆ ಗಾಯ
ಗಾಯಾಳುಗಳನ್ನು ಭೇಟಿ ಮಾಡಿ ಬಂದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಬ್ಬರು ಮಕ್ಕಳು ಹಾಗೂ ಐವರು ವಯಸ್ಕರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಏಳು ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ವಿಚಾರಿಸಿದ್ದೇನೆ. ವೈದ್ಯರಿಂದಲೂ ಮಾಹಿತಿ ಪಡೆದಿರುವೆ.ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸೆಯನ್ನು ಸರ್ಕಾರವೇ ಭರಿಸಲಿದ್ದು ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂತಹ ಯಾವುದೇ ಘಟನೆ ಮರುಕಳಿಸದಂತೆ ಸಕಲ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.



