ವಿಧಾನಸೌಧದ ಎದುರು ಪ್ರಧಾನಿ ಅಪಮಾನಕಾರಿ ಫೋಟೊ, ಬಿಜೆಪಿಯಿಂದ ದೂರು
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿ ಬ್ಯಾನರ್ ಪ್ರದರ್ಶಿಸಿ, ಸುಳ್ಳು ಸುದ್ದಿ ಹರಡುವ ಮೂಲಕ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಬೆಂಗಳೂರು ನಗರ ಬಿಜೆಪಿ ಘಟಕವು ಪೊಲೀಸರಿಗೆ ದೂರು ನೀಡಿದೆ. ಈ ಸಂಬಂಧ ಫೆಬ್ರವರಿ 9, 2026 ರಂದು ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ದೂರಿನ ಪ್ರಕಾರ, ದಿನಾಂಕ 08/02/2026 ರಂದು ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ವಿಧಾನಸೌಧದ ಮುಂದೆ ಕಾನೂನುಬಾಹಿರವಾಗಿ ಬ್ಯಾನರ್ ಒಂದನ್ನು ಅಳವಡಿಸಿದ್ದು, ಅದರಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಬಳಸಿಕೊಂಡು ದೇಶದ ಸಂಪತ್ತಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಲಾಗಿದೆ ಎಂದು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಪೋಸ್ಟರ್‌ಗಳ ಮೂಲಕ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಬಿತ್ತಿ, ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಹಾಗೂ ರಾಜಕೀಯ ದಂಗೆಯನ್ನು ಪ್ರಚೋದಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಒಂದೇ ಅಂತಸ್ತನ್ನು 25 ಜನರಿಗೆ ಮಾರಿದ 32nd Avenue ಸಿಇಒ ಬಂಧನ!
ಪ್ರಧಾನ ಮಂತ್ರಿಯವರ ಘನತೆಗೆ ಚ್ಯುತಿ ತಂದಿರುವ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ದೂರು ಪತ್ರಕ್ಕೆ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಅವರು ಸಹಿ ಮಾಡಿದ್ದಾರೆ.



