ಜ್ಯೋತಿಷಿ ಕಮಲಾಕರ್ ಭಟ್‌ಗೆ ಹನಿಟ್ರ್ಯಾಪ್ ಜಾಲ ಹೆಣೆದಿದ್ದ ಸುಚಿತ್ರಾ ನಾಯ್ಕ್! ಕಥೆ ಬಿಚ್ಚಿಟ್ಟ ಸುಚಿತ್ರಾ ಪತಿ!
Astrologer Kamalakar Bhat | Suchitra Naik | Mahesh Naik: ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಅವರ ಬರ್ಬರ ಹತ್ಯೆ ಪ್ರಕರಣ ಈಗ ಹನಿಟ್ರಾಪ್ ಮತ್ತು ಬ್ಲ್ಯಾಕ್‌ಮೇಲ್ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಕಮಲಾಕರ ಭಟ್ ಮತ್ತು ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಅಸಲಿ ಬಣ್ಣವನ್ನು ಸುಚಿತ್ರಾ ಪತಿ ಮಹೇಶ್ ನಾಯ್ಕ್ ಅವರೇ ಈಗ ಬಹಿರಂಗಪಡಿಸಿದ್ದಾರೆ.
ಸುಚಿತ್ರಾಳ ಪತಿ ಮಹೇಶ್ ನೀಡಿರುವ ಮಾಹಿತಿಯ ಪ್ರಕಾರ, ಸುಚಿತ್ರಾ ಆರಂಭದಲ್ಲಿ ಹಣದ ಆಸೆಗಾಗಿ ಕಮಲಾಕರ ಭಟ್‌ನನ್ನು ಸಂಪರ್ಕಿಸಿದ್ದಳು. ಕಮಲಾಕರನ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಅರಿತಿದ್ದ ಆಕೆ, ಮೊದಲಿಗೆ ಸುಮಾರು ₹1 ರಿಂದ ₹2 ಲಕ್ಷ ಹಣಕ್ಕಾಗಿ ಆತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು. ಆದರೆ, ಇದು ಕೇವಲ ದೈಹಿಕ ಸಂಬಂಧಕ್ಕೆ ಸೀಮಿತವಾಗಿರಲಿಲ್ಲ; ಆ ಸಮಯದಲ್ಲಿ ಕಮಲಾಕರನಿಗೆ ತಿಳಿಯದಂತೆ ಆಕೆ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಳು ಎನ್ನಲಾಗಿದೆ.
ಟಿವಿ ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಹೇಳುತ್ತಾ ಜನಪ್ರಿಯನಾಗಿದ್ದ ಕಮಲಾಕರ ಭಟ್‌ಗೆ ತನ್ನ ಸಾಮಾಜಿಕ ಮರ್ಯಾದೆಯ ಬಗ್ಗೆ ಭಯವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸುಚಿತ್ರಾ, “ನನ್ನನ್ನು ಮತ್ತು ನನ್ನ ಮಕ್ಕಳನ್ನು ನೀನೇ ಸಾಕ್ಬೇಕು, ಇಲ್ಲದಿದ್ದರೆ ವಿಡಿಯೋ ಲೀಕ್ ಮಾಡಿ ನಿನ್ನ ಮಾನ ಹರಾಜು ಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಳು. ಈ ಬ್ಲ್ಯಾಕ್‌ಮೇಲ್‌ಗೆ ಮಣಿದ ಕಮಲಾಕರ, ಆಕೆಯನ್ನು ಶಿವಮೊಗ್ಗದ ಬಾಡಿಗೆ ಮನೆಯಲ್ಲಿ ಇರಿಸಿಕೊಂಡು ಆಕೆಯ ದಾಸನಾಗಿದ್ದ.
ಕೇವಲ ಸುಚಿತ್ರಾ ಮಾತ್ರವಲ್ಲ, ಕಮಲಾಕರ ಭಟ್ ಈ ಹಿಂದೆಯೂ ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಎನ್ನುವ ಆಘಾತಕಾರಿ ವಿಷಯ ಹೊರಬಿದ್ದಿದೆ. ಈತ ಒಬ್ಬ ಮುಸ್ಲಿಂ ಮಹಿಳೆ ಸೇರಿದಂತೆ ನಾಲ್ವರು ಮಹಿಳೆಯರೊಂದಿಗೆ ಪಲ್ಲಂಗದಾಟವಾಡಿದ್ದ ಎನ್ನಲಾಗುತ್ತಿದೆ. ಇಷ್ಟೆಲ್ಲಾ ‘ಕಲಾಕೃತಿ’ಗಳನ್ನು ನಡೆಸುತ್ತಿದ್ದ ಈ ‘ಕಲಾಕಾರ’ ಕೊನೆಗೆ ಸುಚಿತ್ರಾ ಹಣೆದ ಬಲೆಯಲ್ಲೇ ಸಿಲುಕಿ, ಹತ್ಯೆಯಂತಹ ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಹಣ ಮತ್ತು ಕಾಮದ ಬ್ಲ್ಯಾಕ್‌ಮೇಲ್‌ನಿಂದ ಆರಂಭವಾದ ಈ ಸಂಬಂಧ, ಕೊನೆಗೆ ಅಮಾಯಕ ವಸಂತ ನಾಯ್ಕ್ ಅವರ ಹತ್ಯೆಯಲ್ಲಿ ಬಂದು ನಿಂತಿದೆ. ಸುಚಿತ್ರಾಳ ಪತಿಯ ಹೇಳಿಕೆಯ ನಂತರ ಪೊಲೀಸರು ಈಗ ಈ ಪ್ರಕರಣವನ್ನು ಹನಿಟ್ರಾಪ್ ಜಾಲದ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಜ್ಯೋತಿಷ್ಯದ ಮೂಲಕ ಜನರ ಭವಿಷ್ಯ ಹೇಳುತ್ತಿದ್ದವನು, ಇಂದು ಮಹಿಳೆಯ ಬಲೆಗೆ ಬಿದ್ದು ತನ್ನ ಭವಿಷ್ಯವನ್ನೇ ಜೈಲು ಪಾಲು ಮಾಡಿಕೊಂಡಿರುವುದು ವಿಪರ್ಯಾಸದ ಸಂಗತಿ.



