ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ಕೊಡಿ : ಆರ್.‌ ಅಶೋಕ್‌ ಆಗ್ರಹ

ಬೆಂಗಳೂರು : ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಅವಧಿ ಅಧಿಕಾರದಲ್ಲಿದಿದ್ದು ಕಾಂಗ್ರೆಸ್‌ ಪಕ್ಷ. ಅತಿ ಹೆಚ್ಚು ಬಜೆಟ್‌ ಮಂಡಿಸಿರುವುದು ಸಿದ್ದರಾಮಯ್ಯ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಬೇಕು ಎಂದು ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಅನ್ಯ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕ್ರೊಢೀಕರಿಸಿ ಇಂತಿಷ್ಟು ಮೊತ್ತ ಹಣವನ್ನು ನೀಡಿರುವುದಾಗಿ ಹಾರಿಕೆ ಭರವಸೆ ನೀಡಬಾರದು. ಕೆಕೆಆರ್‌ಡಿಬಿ ಸಹಿತ ಇತರೆ ಅಭಿವೃದ್ಧಿ ಮಂಡಳಿ ಅಥವಾ ನಿಗಮಗಳಿಗೆ ನೀಡುವ ಅನುದಾನವನ್ನು ಈ ಲೆಕ್ಕಾಚಾರಕ್ಕೆ ಸೇರಿಸಬಾರದು.

ತಾರತಮ್ಯ ನಿವಾರಣೆಗಾಗಿಯೇ ವಿಶೇಷ, ಪ್ರತ್ಯೇಕ ಅನುದಾನ ಒದಗಿಸಬೇಕು. ಇಲ್ಲವಾದರೆ ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ರಾಜ್ಯದ ಜನ ಭಾವಿಸಬೇಕಾಗುತ್ತದೆ ಎಂದು ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಅನುದಾನ ನೀಡಿದ ದಾಖಲೆ ಮಾಡಿ

ಪ್ರೊ. ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಎರಡು ದಶಕಗಳ ಬಳಿಕವೂ ಕಡಿಮೆ ಆಗಿಲ್ಲ. ಶೇಕಡಾ 65 ರಿಂದ ಶೇಕಡಾ 72.8ಕ್ಕೆ ಹೆಚ್ಚಳ ಆಗಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಅತಿ ಹೆಚ್ಚು ಅವಧಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಮತ್ತು ದಿವಂಗತ ದೇವರಜ ಅರಸು ಅವರ ದಾಖಲೆ ಮುರಿದು ಅತಿ ಹೆಚ್ಚು ಅವಧಿಯ ಸಿಎಂ ಎಂಬ ಹೆಗ್ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವ ಸಿದ್ದರಾಮಯ್ಯ ಅವರೇ ಹೊಣೆ ಎಂದು ಆರೋಪಿಸಿದ್ದಾರೆ.

ಹಿಂದುಳಿದ ಪ್ರದೇಶಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಕಾಂಗ್ರೆಸ್‌ ಮುಖಂಡರು ನಿಲ್ಲಿಸಬೇಕು. ಅಧಿಕಾರದ ದಂಡ ಈಗ ಅವರ ಬಳಿಯೇ ಇದೆ. ಹೇಗೂ ದಾಖಲೆಯ ಮೇಲೆ ದಾಖಲೆ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ ಅವರು, ಪ್ರಾದೇಶಿಕ ತಾರತಮ್ಯ ನಿವಾರಣೆಗೂ ಅತಿ ಹೆಚ್ಚು ಅನುದಾನ ಹಂಚಿಕೆ ಮಾಡಿ ಮತ್ತೊಂದು ದಾಖಲೆ ಬರೆಯಲಿ ಎಂದು ಸವಾಲು ಹಾಕಿದ್ದಾರೆ.

ತಾರತಮ್ಯ ನಿವಾರಣೆ ನಿಗಾ ಘಟಕ ಸ್ಥಾಪಿಸಿ

ದೇಶದ ದೊಡ್ಡ ರಾಜ್ಯಗಳ ಪೈಕಿ ನಿವ್ವಳ ದೇಶಿಯ ಉತ್ಪನ್ನ (ಎನ್‌ಎಸ್‌ಡಿಪಿ)ದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ಪ್ರಾದೇಶಿಕ ಅಸಮತೋಲನಕ್ಕೆo ಕಾರಣಗಳ ಬಗ್ಗೆಯೂ ಮಾತನಾಡಬೇಕು.

ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಪ್ರೊ. ಗೋವಿಂದರಾವ್‌ ಸಮಿತಿ ನೀಡಿರುವ 11 ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಟಾನಕ್ಕೆ “ಪ್ರಾದೇಶಿಕ ತಾರತಮ್ಯ ನಿವಾರಣೆ ನಿಗಾ ಘಟಕ” ಸ್ಥಾಪಿಸಿ “ಅನುದಾನ ಹಂಚಿಕೆ, ಬಳಕೆ ಮತ್ತು ಪ್ರಗತಿ” ಮೇಲೆ ನಿಗಾ ಮತ್ತು ಮೌಲ್ಯಮಾಪನಕ್ಕೆ ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೈಗೊಳ್ಳುವ ಕಾಮಗಾರಿ ಅಥವಾ ಯೋಜನೆಗಳಿಗೆ ವೇಳಾಪಟ್ಟಿ ನಿಗದಿಗೊಳಿಸಿ ಕಾಲಮಿತಿಯಲ್ಲೇ ಅನುಷ್ಟಾನ ಆಗುವಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ನಿಗದಿತ ಸಮಯದೊಳಗೆ ಪ್ರಗತಿ ಅಸಾಧ್ಯ. ಈ ಸೂಚನೆಗಳನ್ನು ಉಲ್ಲಂಘಿಸುವ ಅಥವಾ ವಿಶೇಷ ಅನುದಾನ ದುರ್ಬಳಕೆ ಮಾಡಿದವರ ವಿರುದ್ಧ ಕಠಿಣ ಕ್ರಮಗಳಿಗೂ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕು ಎಂದೂ ಅಶೋಕ್‌ ಅವರು ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ವಿಶೇಷ ಹಣ ದುರ್ಬಳಕೆ : ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ

ಕೆಕೆಆರ್‌ಡಿಬಿ ಪುನಾರಚನೆ ಅಗತ್ಯ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯ ಸ್ವರೂಪ ಬದಲಾಗಬೇಕು ಎಂಬುದು ಆ ಭಾಗದ ಜನತೆ ಆಶಯವಾಗಿದೆ. ಚುನಾಯಿತ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಯೋಜನೆ ರೂಪಿಸುವ ಪದ್ಧತಿ ಬದಲಾಗಬೇಕು. ತಜ್ಞರ ಸಲಹೆಯಂತೆ ಹೊಸದಾಗಿ ಮಾರ್ಗಸೂಚಿ ರೂಪಿಸಿ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಗೊಳಿಸಿ, ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಬೇಕು.

ಇದಕ್ಕಾಗಿ ಪ್ಲಾನಿಂಗ್‌ ಇಲಾಖೆಯ ಕಾರ್ಯಚಟುವಟಿಕೆಗಳ ಸ್ವರೂಪ ಬದಲಾಗಬೇಕು ಎಂಬ ಗೋವಿಂದರಾವ್‌ ಸಮಿತಿ ಅಭಿಪ್ರಾಯವನ್ನು ಆದ್ಯತೆ ಮೇರೆಗೆ ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಗೋವಿಂದರಾವ್‌ ಸಮಿತಿ ಪ್ರಮುಖ ಶಿಫಾರಸ್ಸಿನಲ್ಲಿ, “ಬಜೆಟ್‌ನಲ್ಲಿ ನಿಯಮಿತ ಅನುದಾನದ ಜತೆಗೆ ಹೆಚ್ಚುವರಿಯಾಗಿ ಸೂಚಿಸಲಾದ ಅನುದಾನ ಹಂಚಿಕೆ ಮಾಡಬೇಕು” ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಹಿಂದುಳಿದಿರುವಿಕೆ ಆಧಾರದ ಮೇಲೆಯೇ ಅನುದಾನ ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ್‌ ಆಗ್ರಹಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories