Holi Skin Care Tips: ತ್ವಚೆ, ಕೂದಲಿಗೆ ಅಂಟಿದ ಹೋಳಿಯ ಬಣ್ಣ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್‌

ಹೋಳಿಯ ಬಣ್ಣಗಳು ನಿಮ್ಮ ತ್ವಚೆ ಮತ್ತು ಕೂದಲಿಗೆ ಸಮಸ್ಯೆ ಉಂಟುಮಾಡಬಹುದು. ಹೋಳಿ ಆಡುವ ಮೊದಲು ಹಾಗೂ ನಂತರ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಸಿಂಪಲ್‌ ಟಿಪ್ಸ್ ಪಾಲಿಸಿ.

Pre and Post Holi Skin Care Tips: ಹೋಳಿ ಹಬ್ಬದ ಆಚರಣೆ ಬಂದೇ ಬಿಟ್ಟಿತು. ದೊಡ್ಡ ದೊಡ್ಡ ಅಂಗಡಿಗಳಿಂದ ಹಿಡಿದು ಚಿಕ್ಕ ಅಂಗಡಿಗಳವರೆಗೆ ಎಲ್ಲೆಲ್ಲೂ ಬಣ್ಣಗಳ ಮಾರಾಟ. ಆಕರ್ಷಕ ಪ್ಯಾಕೇಜಿಂಗ್‌ಗಳಲ್ಲಿ ಬರುವ ಬಣ್ಣಗಳನ್ನು ನೋಡಿ ಬಹಳಷ್ಟು ಜನರು ಮರುಳಾಗುವುದುಂಟು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅದನ್ನೇ ಖರೀದಿಸುವವರು ಇದ್ದಾರೆ. ಆದರೆ ಹಾಗೆ ಕಡಿಮೆ ದರದ ಬಣ್ಣಗಳು ಹಾನಿಕಾರಕ ರಾಸಾಯನಿಕವಾಗಿರುವ ಸಾಧ್ಯತೆಯಿರುತ್ತದೆ.

ಕಲಬೆರಕೆ ಬಣ್ಣಗಳು ಕಣ್ಣು ಮತ್ತು ತ್ವಚೆಯ ಮೇಲೆ ಭಾರಿ ಹಾನಿಯುಂಟುಮಾಡಬಲ್ಲದು. ಕೆಲವೊಮ್ಮೆ ವೈದ್ಯರ ಮೊರೆ ಹೋಗುವ ಸಂದರ್ಭವೂ ಬರಬಹುದು. ಆದ್ದರಿಂದ ಹೋಳಿ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಬಣ್ಣ ಆಡುವ ಮೊದಲು ಹಾಗೂ ನಂತರ ನಿಮ್ಮ ತ್ವಚೆಯನ್ನು ಹೇಗೆ ಆರೈಕೆ ಮಾಡಿಕೊಳ್ಳಬೇಕು? ಇಲ್ಲಿದೆ ಓದಿ.

ಮುಖದ ಬಗ್ಗೆ ಇರಲಿ ವಿಶೇಷ ಕಾಳಜಿ

ಮುಖದ ಚರ್ಮ ಬಹಳ ಮೃದುವಾಗಿರುತ್ತದೆ. ಅದು ರಾಸಾಯನಿಕಗಳ ಧಾಳಿಗೆ ಬಹಳ ಬೇಗ ಪ್ರತಿಕ್ರಿಯಿಸುತ್ತದೆ. ಇದರಿಂದ ಮುಖದ ಮೇಲೆ ಗುಳ್ಳೆಗಳಾಗುವುದು, ತುರಿಕೆ, ಬಣ್ಣ ಕಳೆದುಕೊಳ್ಳುವುದನ್ನು ಕಾಣಬಹುದು. ಹಾಗಾಗಿ ಬಣ್ಣ ಹಚ್ಚಿಸಿಕೊಳ್ಳುವ ಮೊದಲು ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿ. ಇದು ಮುಖಕ್ಕೆ ರಕ್ಷಣಾತ್ಮಕ ಪದರವನ್ನು ನಿರ್ಮಿಸುತ್ತದೆ.

ಹಾನಿಕಾರಕ ಬಣ್ಣಗಳು ನೇರವಾಗಿ ಚರ್ಮ ಘಾಸಿಗೊಳಿಸುವುದನ್ನು ತಪ್ಪಿಸುತ್ತದೆ. ಮುಖಕ್ಕೆ ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿಯೂ ಹಚ್ಚಬಹುದು. ತ್ವಚೆಯಂತೆಯೇ ತಲೆಯ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಎಣ್ಣೆ ಬಣ್ಣಗಳು ನೇರವಾಗಿ ಚರ್ಮಕ್ಕೆ ಅಂಟಿಕೊಳ್ಳುವುದನ್ನು ತಪ್ಪಿಸುತ್ತದೆ. ಹೋಳಿಯ ನಂತರ ಬಣ್ಣ ತೆಗೆಯಲು ಸುಲಭವಾಗುತ್ತದೆ.

ಇದನ್ನೂ ಓದಿ: ಕಾಮ ದಹನದ ನಂತರ ಈ ಒಂದು ವಸ್ತುವನ್ನು ಮನೆಗೆ ತನ್ನಿ: ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲಾ ದೂರವಾಗುತ್ತವೆ

ಹೋಳಿಯ ನಂತರ ತ್ವಚೆಗೆ ಅಂಟಿದ ಬಣ್ಣ ತೆಗೆಯುವುದು ಹೇಗೆ?

ಹೋಳಿಯ ಬಣ್ಣದಿಂದ ತ್ವಚೆ ಮತ್ತು ಕೂದಲು ಒರಟಾಗುತ್ತದೆ. ಬಣ್ಣಗಳು ತ್ವಚೆಯ ಮೇಲಿನ ತೇವಾಂಶವನ್ನು ತೆಗೆದುಹಾಕಿ ಶುಷ್ಕಗೊಳಿಸುತ್ತವೆ. ಆದ್ದರಿಂದ ತ್ವಚೆ ಮತ್ತು ಕೂದಲು ಸ್ವಚ್ಚಗೊಳಿಸುವಾಗಲೂ ಕಾಳಜಿವಹಿಸುವುದು ಮುಖ್ಯವಾಗಿದೆ. ತ್ವಚೆ ಮತ್ತು ಕೂದಲಿಗೆ ಅಂಟಿದ ಬಣ್ಣ ಸ್ವಚ್ಛಗೊಳಿಸಬೇಕೆಂದು ಗಟ್ಟಿಯಾಗಿ ಉಜ್ಜುವುದು, ಸಿಕ್ಕ ಸಿಕ್ಕ ಸಾಬೂನುಗಳನ್ನು ಬಳಸುವುದು ಮಾಡಬಾರದು.

ಮೊದಲು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಫೇಸ್‌ ವಾಶ್‌ ಅಥವಾ ಕ್ಲೆನ್ಸರ್‌ ಬಳಸಿ ಮೃದುವಾಗಿ ಉಜ್ಜಿ ತೊಳೆಯಿರಿ. ಕೂದಲಿಗೆ ಸೌಮ್ಯ ಶಾಂಪೂಗಳನ್ನು ಬಳಸಿ. ನಂತರ ಚರ್ಮವನ್ನು ಪುನಃ ತೇವಾಂಶಯುಕ್ತಗೊಳಿಸಲು ಅಲೋವೆರಾ ಜೆಲ್‌ ಮತ್ತು ಮಾಯಿಶ್ಚರೈಸರ್‌ ಹಚ್ಚಿ. ಕೂದಲಿಗೆ ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆ ಹಚ್ಚಿ ಮಸಾಜ್‌ ಮಾಡಿ. ಚರ್ಮ ಮತ್ತು ಕೂದಲಿನ ಹೊಳಪು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories