ರಾಜ್ಯದಲ್ಲಿ ಮಿತಿಮೀರಿದ ಸೂರ್ಯನ ಧಗೆ..! ಕೆಲವು ಜಿಲ್ಲೆಗಳಲ್ಲಿ ಮತ್ತೆ ವರುಣನ ಸಿಂಚನ..!
ರಾಜ್ಯದಲ್ಲಿ ಸೂರ್ಯನ ಶಾಖ ಮಿತಿಮೀರಿದೆ. ಸುಡುವ ಬಿಸಿಲಿನಿಂದ ಹೈರಾಣಾದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಶುಭಸುದ್ದಿ ನೀಡಿದೆ. ರಾಜ್ಯಾದ್ಯಂತ ಮಳೆಯ ಮುನ್ಸೂಚನೆ ನೀಡಿದೆ .ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಇಂದು ಜೋರಾಗಿದೆ. ಆದರೆ ಸಂಜೆ ಮೋಡ ಕವಿದ ವಾತಾವರಣ ಇರಲಿದ್ದು , ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಏಪ್ರಿಲ್ 18 ಮತ್ತು 19ರಲ್ಲಿ ಕರಾವಳಿ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ತಿಳಿದೆ. ಮಲೆನಾಡಿನ ಕೊಡಗು ಮತ್ತು ಹಾಸನದಲ್ಲಿ ರಾತ್ರಿಯ ವೇಳೆ ತಂಪಾದ ವಾತಾವರಣವಿದ್ದರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಈಗಾಗಲೇ ತುಂತುರು ಮಳೆಯ ಸಿಂಚನವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಇದನ್ನೂ ಓದಿ: ಸುಡುವ ಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಮೀರಿದ ತಾಪಮಾನ
ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದ್ದು, ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಜನರಿಗೆ ಮಳೆರಾಯ ತಂಪು ಸುದ್ದಿ ನೀಡಿದ್ದಾನೆ. ಇಂದು ಸಂಜೆ ವೇಳೆಗೆ ಈ ಭಾಗದ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಏಪ್ರಿಲ್ 20ರಿಂದ ಮಳೆಯ ಅಬ್ಬರ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸದ್ಯಕ್ಕೆ ಮೋಡ ಕವಿದ ವಾತಾವರಣವಿದ್ದರೂ, ಮಳೆ ಸುರಿಯಲು ಏಪ್ರಿಲ್ 18ರವರೆಗೆ ಕಾಯುವುದು ಅನಿವಾರ್ಯವಾಗಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನರಿಗೆ ಈ ಮಳೆಯ ಮುನ್ಸೂಚನೆಯು ಹೊಸ ಭರವಸೆಯನ್ನು ಮೂಡಿಸಿದೆ.



