ರೈಲ್ವೆ ಇಲಾಖೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ಇಲಾಖಾ ಪರೀಕ್ಷೆಯಿಂದ ಕನ್ನಡ ಔಟ್; ಕರವೇ ಆಕ್ರೋಶ!

ನೈಋತ್ಯ ರೈಲ್ವೆ ಇಲಾಖೆಯು ತನ್ನ ಮೈಸೂರು ವಿಭಾಗದ ವಿವಿಧ ಹುದ್ದೆಗಳ ಮುಂಬಡ್ತಿಗಾಗಿ ನಡೆಸಲುದ್ದೇಶಿಸಿರುವ ಲಿಖಿತ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ಭಾಷೆಗೆ ಅವಕಾಶ ನಿರಾಕರಿಸುವ ಮೂಲಕ ಕನ್ನಡಿಗರ ಭಾಷಾ ಹಕ್ಕನ್ನು ಕಡೆಗಣಿಸಿದೆ.

ನೈಋತ್ಯ ರೈಲ್ವೆ ಇಲಾಖೆಯು ತನ್ನ ಮೈಸೂರು ವಿಭಾಗದ ವಿವಿಧ ಹುದ್ದೆಗಳ ಮುಂಬಡ್ತಿಗಾಗಿ ನಡೆಸಲುದ್ದೇಶಿಸಿರುವ ಲಿಖಿತ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ಭಾಷೆಗೆ ಅವಕಾಶ ನಿರಾಕರಿಸುವ ಮೂಲಕ ಕನ್ನಡಿಗರ ಭಾಷಾ ಹಕ್ಕನ್ನು ಕಡೆಗಣಿಸಿದೆ. ಈ ಹಿಂದೆ ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಮಣಿದು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದ ಪದೋನ್ನತಿ ಪರೀಕ್ಷೆಯನ್ನು, ಇದೀಗ ಯಾವುದೇ ಬದಲಾವಣೆಯಿಲ್ಲದೆ ಜೂನ್ 25ರಂದು ನಡೆಸಲು ಇಲಾಖೆ ಹೊಸ ವೇಳಾಪಟ್ಟಿ ಪ್ರಕಟಿಸಿದೆ.

ಇಲಾಖೆಯ ಈ ಹಠಮಾರಿತನದ ಧೋರಣೆಯು ಕರ್ನಾಟಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ವಿಭಾಗದಲ್ಲಿ ಖಾಲಿ ಇರುವ ಆಫೀಸ್ ಸೂಪರಿಂಟೆಂಡೆಂಟ್, ಸೀನಿಯರ್ ಕ್ಲರ್ಕ್ ಮತ್ತು ಗೂಡ್ಸ್ ಟ್ರೇನ್ ಮ್ಯಾನೇಜರ್ ಸೇರಿದಂತೆ ಒಟ್ಟು 73 ಜವಾಬ್ದಾರಿಯುತ ಹುದ್ದೆಗಳ ಭರ್ತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಆದರೆ, ಇಲಾಖೆಯು ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸುತ್ತಿದ್ದು, ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ಬರೆಯಲು ಇಲಾಖೆ ಅವಕಾಶ ಕಲ್ಪಿಸಿಲ್ಲ. ಇದು ನಮ್ಮದೇ ರಾಜ್ಯದಲ್ಲಿ ಕನ್ನಡಿಗರಿಗೆ ಮುಂಬಡ್ತಿ ಸಿಗದಂತೆ ವಂಚಿಸುವ ವ್ಯವಸ್ಥಿತ ಸಂಚು ಎಂದು ಕನ್ನಡ ಹೋರಾಟಗಾರರು ದೂರಿದ್ದಾರೆ.

ಇದನ್ನೂ ಓದಿ : ಲಿವ್-ಇನ್ ರಿಲೇಷನ್‌ಶಿಪ್ ದುರಂತ: ಕ್ಷಣಿಕ ಕೋಪಕ್ಕೆ ಯುವತಿಯನ್ನು ಉಸಿರುಗಟ್ಟಿಸಿ ಕೊಂದ ಪ್ರೇಮಿ!

ರೈಲ್ವೆ ಇಲಾಖೆಯ ಈ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ಮಾತನಾಡಿ, “ರೈಲ್ವೆ ಇಲಾಖೆಯು ತಕ್ಷಣವೇ ತನ್ನ ದೋಷಪೂರಿತ ನಿಯಮಗಳನ್ನು ತಿದ್ದಿಕೊಂಡು, ಕನ್ನಡದಲ್ಲೂ ಪರೀಕ್ಷೆ ಬರೆಯಲು ಸೂಕ್ತ ಆದೇಶ ಹೊರಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಇಲಾಖೆಯು ತನ್ನ ಹಠವನ್ನು ಮುಂದುವರೆಸಿ ಜೂನ್ 25ರಂದು ಪರೀಕ್ಷೆ ನಡೆಸಲು ಮುಂದಾದರೆ, ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಮತ್ತು ಅಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳಿಗೆ ರೈಲ್ವೆ ಆಡಳಿತ ಮಂಡಳಿಯೇ ಜವಾಬ್ದಾರಿಯಾಗಲಿದೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories