ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಥುನ್ ಹಾಗೂ ನಾಗೇಶ್ ಅವರಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಉಡುಪಿ : ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಮಿಥುನ್ ಹಾಗೂ ನಾಗೇಶ್ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ಮಣಿಪಾಲ ಸಮೀಪದ ಮಂಚಿ ಕುಮೇರಿ ನಿವಾಸಿ ರಮಾನಾಥ ರೈ ಅವರು ಟೈಗರ್ ಸರ್ಕಲ್ ಬಳಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. 2022ರ ಫೆಬ್ರವರಿ 18ರಂದು ಅವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಪತ್ನಿ ಸುಮತಿ ಒಬ್ಬರೇ ಇದ್ದ ವೇಳೆ ಸುಮತಿಯವರ ಸಂಬಂಧಿ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಮನೆಗೆ ಬಂದಿದ್ದಾರೆ. ಪರಿಚಿತರಾಗಿದ್ದರಿಂದ ಸುಮತಿಯವರು ಬಾಗಿಲು ತೆರೆದಿದ್ದು, ಮನೆಗೆ ಒಳನುಗ್ಗಿದ ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯನ್ನು ಹಿಸುಕಿದ್ದಾರೆ. ಇದರಿಂದ ಸುಮತಿ ಪ್ರಜ್ಞಾಹೀನರಾಗಿದ್ದರು. ನಂತರ ಆರೋಪಿಗಳು ಸುಮತಿಯವರನ್ನು ಚೀಲದಲ್ಲಿ ಹಾಕಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಸ್ಥಳಾಂತರಿಸಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಗಂಡಂದಿರಿಗೆ ಬಿಗ್ ರಿಲೀಫ್! ಓದಿದ ಪತ್ನಿಯರಿಗೆ ಶಾಕ್!” “ಹೈಕೋರ್ಟ್ ನೀಡಿದ ಈ ತೀರ್ಪು ಗೊತ್ತಾ?”

ಇದೇ ವೇಳೆ ರಮಾನಾಥ ರೈ ಹಾಗೂ ನೆರೆಹೊರೆಯವರು ಮನೆ ಬಾಗಿಲು ತಟ್ಟಿದಾಗ ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದ್ದು, ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಸೂಟ್‌ಕೇಸ್ ತೆರೆಯುತ್ತಿದ್ದಂತೆ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು ಒಂದು ವಾರ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದರು.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕಿರಣ್ ಎಸ್ ಗಂಗಣ್ಣವರ್ ಅವರ ನ್ಯಾಯಪೀಠ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 325ರಡಿ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ವಸೂಲಾದ ದಂಡದ ಮೊತ್ತದಲ್ಲಿ 45 ಸಾವಿರ ರೂಪಾಯಿಯನ್ನು ಗಾಯಾಳು ಸುಮತಿಯವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದರು.

 

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories