ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು! ಕಲ್ಲಂಗಡಿ ಹಣ್ಣು ಕಿತ್ತಿದ್ದಕ್ಕೆ ಚಾಕುವಿನಿಂದ ಇರಿದು ಬಾಲಕನ ಹತ್ಯೆ!
13 ವರ್ಷದ ಬಾಲಕ ಒಂದೇ ಒಂದು ಕಲ್ಲಂಗಡಿ ಕಿತ್ತ ಎಂದು ಕೋಪಗೊಂಡ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.

ತನ್ನ ಸಂಬಂಧಿಕರ ಹೊಲದಲ್ಲಿ ಅನುಮತಿಯಿಲ್ಲದೇ ಕಲ್ಲಂಗಡಿ ಕಿತ್ತ ಬಾಲಕನೊಬ್ಬ ಕೊಲೆಯಾದ ಅಮಾನುಷ ಘಟನೆಯು ಆಗ್ರಾದ ಬಸಾಯಿ ಜಾಗ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಿ ಖೇಡಾ ಗ್ರಾಮದಲ್ಲಿ ಸಂಭವಿಸಿದೆ. 13 ವರ್ಷದ ಬಾಲಕ ಒಂದೇ ಒಂದು ಕಲ್ಲಂಗಡಿ ಕಿತ್ತ ಎಂದು ಕೋಪಗೊಂಡ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಆರೋಪಿಗಳಾದ ರಿಯಾಝುದ್ದೀನ್ ಹಾಗೂ ಶಿರಾಝುದ್ದೀನ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಅಸಲಿಗೆ ಕಲ್ಲಂಗಡಿ ಬೆಳೆದ ಜಮೀನು ಕೊಲೆಯಾದ ಬಾಲಕನ ಕುಟುಂಬಕ್ಕೆ ಸೇರಿತ್ತು. ಈ ಜಮೀನನ್ನು ಆರೋಪಿಗಳಾದ ರಿಯಾಝುದ್ದೀನ್ ಹಾಗೂ ಶಿರಾಝುದ್ದೀನ್‌ರಿಗೆ ಗೇಣಿಗೆ ನೀಡಲಾಗಿತ್ತು. ಈ ಜಮೀನಿನಲ್ಲಿ ಆರೋಪಿಗಳು ಕಲ್ಲಂಗಡಿ ಬೆಳೆದಿದ್ದರು ಎನ್ನಲಾಗಿದೆ. ತನ್ನದೇ ಕುಟುಂಬಕ್ಕೆ ಸೇರಿದ್ದ ಜಮೀನಾದ್ದರಿಂದ ಬಾಲಕ ಕಲ್ಲಂಗಡಿ ಕೀಳಲು ಹೋಗಿದ್ದಾನೆ.
ಇದನ್ನೂ ಓದಿ : ಲಿವರ್ ಸಮಸ್ಯೆಯಿದ್ದರೂ ಮದ್ಯಕ್ಕೆ ಪಟ್ಟು: ಪತ್ನಿ ಎಣ್ಣೆ ಕೊಡಿಸಲಿಲ್ಲವೆಂದು ಆಟೋ ಚಾಲಕ ಆತ್ಮಹತ್ಯೆ!
ಅನುಮತಿಯಿಲ್ಲದೇ ಕಲ್ಲಂಗಡಿ ಕೀಳುತ್ತಿದ್ದ ಬಾಲಕನ ನಡೆ ಗೇಣಿದಾರರಿಗೆ ಕೋಪ ತರಿಸಿದೆ. ಇದೆ ಕಾರಣಕ್ಕೆ ಬಾಲಕನ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಘಟನೆ ಬಳಿಕ ಸೋನಿಖೇಡಾ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.



