ಅಟಲ್ ಕನಸು ನನಸು – ಶ್ಯಾಮ ಪ್ರಸಾದ್ ಮುಖರ್ಜಿ ತವರಿನಲ್ಲಿ ಕಮಲದ ಆರ್ಭಟ!

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವಲ್ಲಿ ಕೊನೆಗೂ ಬಿಜೆಪಿ ಯಶಸ್ವಿಯಾಗಿದೆ

ಸ್ವಾತಂತ್ರ್ಯಾಪೂರ್ವದಿಂದಲೂ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಪಕ್ಷ ಕಾಂಗ್ರೆಸ್​. ಇದಕ್ಕೆ ಪರ್ಯಾಯವಾಗಿ 1951ರಲ್ಲಿ ಶ್ಯಾಮಪ್ರಸಾದ್​ ಮುಖರ್ಜಿ ಭಾರತೀಯ ಜನಸಂಘವನ್ನು ಸ್ಥಾಪನೆ ಮಾಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಶ್ಯಾಮಪ್ರಸಾದ್​ ಮುಖರ್ಜಿ ತವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರಲಿಲ್ಲ. ತಮ್ಮ ಜೀವಿತಾವಧಿಯುದ್ದಕ್ಕೂ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರೂ ಈ ಕೊರಗನ್ನು ಹೊಂದಿದ್ದರು. ಆದರೆ ಈ ಬಾರಿ ಬಂಗಾಳ ವಿಧಾನಸಭಾ ಚುನಾವಣೆ ಹೊಸ ಇತಿಹಾಸ ಬರೆದಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವಲ್ಲಿ ಕೊನೆಗೂ ಬಿಜೆಪಿ ಯಶಸ್ವಿಯಾಗಿದೆ.

ಪ್ರಬಲ ಪ್ರಾದೇಶಿಕ ಪಕ್ಷ ಎಂದೇ ಗುರುತಿಸಿಕೊಂಡಿದ್ದ ಟಿಎಂಸಿ ಪಕ್ಷವನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಸ್ಥಾಪಿಸುವಲ್ಲಿ ಕೇಸರಿಪಾಳಯ ಯಶಸ್ಸು ಸಾಧಿಸಿದೆ. ಕಮ್ಯುನಿಸ್ಟ್ ನೇತೃತ್ವದ ಎಡರಂಗವು 34 ವರ್ಷಗಳ ಕಾಲ ಇಲ್ಲಿ ಆಳ್ವಿಕೆ ನಡೆಸಿದರೆ, ನಂತರದ 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತ ನಡೆಸಿತ್ತು.
10 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವನ್ನು ಸರಿಗಟ್ಟಿ ಅಭೂತಪೂರ್ವ ಗೆಲುವು ಸಾಧಿಸುವುದು ಬಿಜೆಪಿಗೆ ಸುಲಭದ ಮಾತಾಗಿರಲಿಲ್ಲ. ಕಳೆದ ಮೂರು ಚುನಾವಣೆಗಳಿಂದ ಶಾಸಕ ಸ್ಥಾನವನ್ನು ಹೆಚ್ಚಿಸಿಕೊಂಡು ಬಂದಿದ್ದ ಬಿಜೆಪಿಯು ಈ ಬಾರಿ ಸರ್ಕಾರ ರಚಿಸುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದೆ.

ಇದನ್ನೂ ಓದಿ : ಬಂಗಾಳದಲ್ಲಿ ದೀದಿಗೆ ಮರ್ಮಾಘಾತ: ಸ್ವಕ್ಷೇತ್ರ ಭವಾನಿಪುರದಲ್ಲೂ ಮಮತಾ ಬ್ಯಾನರ್ಜಿಗೆ ಸೋಲು, ಬಿಜೆಪಿಗೆ ಭರ್ಜರಿ ಬಹುಮತ!

ಈ ವಿಜಯದ ಬೆನ್ನಲ್ಲೇ ಬಿಜೆಪಿಯು ತನ್ನ ಅಧಿಕೃತ ಖಾತೆಯಲ್ಲಿ ಭಾರತದ ಭೂಪಟವನ್ನು ಬಿಡುಗಡೆ ಮಾಡಿದೆ. ದೇಶದ ಹೃದಯಭಾಗದಿಂದ ಬಂಗಾಳದವರೆಗೆ… ಭೂಪಟವು ಕೇವಲ ವಿಸ್ತರಣೆಯಾಗುತ್ತಿಲ್ಲ, ಬದಲಿಗೆ ಇದು ಪ್ರಗತಿ ಸಾಧಿಸಲು ಸಂಕಲ್ಪ ಮಾಡಿರುವ ರಾಷ್ಟ್ರವೊಂದರ ಅಚಲ ನಂಬಿಕೆಯಾಗಿದೆ. ಉತ್ತರದಿಂದ ಈಶಾನ್ಯದವರೆಗೆ… ಬಣ್ಣದ ಬದಲಾವಣೆಯು ಈಗ ಅಸ್ಪಷ್ಟವಾಗಿ ಉಳಿದಿಲ್ಲ. ಈಗಾಗಲೇ ಆರಂಭವಾಗಿರುವ ಯಶೋಗಾಥೆಯಲ್ಲಿ ಬಂಗಾಳವು ಕೇವಲ ಇತ್ತೀಚಿನ ಅಧ್ಯಾಯವಷ್ಟೇ ಎಂದು ಬರೆದುಕೊಂಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಭಾರತದ ಭೂಪಟವನ್ನು ನೋಡುತ್ತಿದ್ದರೆ ಶೀಘ್ರದಲ್ಲಿಯೇ ಕಾಂಗ್ರೆಸ್​ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದು ಪಕ್ಕಾ ಎನಿಸಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories