ಹೆಂಡತಿಯ ಕಾಯಿಲೆ ಗುಣಪಡಿಸುವ ಆಸೆ ತೋರಿಸಿ 12 ಲಕ್ಷ ರೂ. ಪಂಗನಾಮ: ಉಡುಪಿಯಲ್ಲಿ ನಡೆದ ಈ ಘಟನೆ ನಿಮಗೊಂದು ಪಾಠ

ಕಾಯಿಲೆಯಿಂದ ಬಳಲುತ್ತಿರುವವರ ಹತಾಶೆಯನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕ ಜಾಲವೊಂದು ಉಡುಪಿ ಮತ್ತು ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದು, ವೃದ್ಧರೊಬ್ಬರಿಗೆ ಬರೋಬ್ಬರಿ 12,09,160 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಾರ್ಕಳ: ಕಾಯಿಲೆಯಿಂದ ಬಳಲುತ್ತಿರುವವರ ಹತಾಶೆಯನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕ ಜಾಲವೊಂದು ಉಡುಪಿ ಮತ್ತು ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದು, ವೃದ್ಧರೊಬ್ಬರಿಗೆ ಬರೋಬ್ಬರಿ 12,09,160 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳ್ಮಣ್ ಗ್ರಾಮದ ನಿವಾಸಿ ರೊನಾಲ್ಡ್ ರೋಡ್ರಿಗಸ್ (68) ಎಂಬುವವರು ವಿದೇಶದಲ್ಲಿ ಕೆಲಸ ಮುಗಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇವರ ಪತ್ನಿ ರೋಸಿ ಅವರು ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಮಾರ್ಚ್ 23ರಂದು ರೊನಾಲ್ಡ್ ಅವರು ತಮ್ಮ ಪತ್ನಿಯನ್ನು ಮಣಿಪಾಲದ ಖಾಸಗಿ‌ ಆಸ್ಪತ್ರೆಗೆ ಫಿಸಿಯೋಥೆರಫಿಗಾಗಿ ಕರೆದುಕೊಂಡು ಬಂದಿದ್ದರು.

ಇದನ್ನೂ ಓದಿ : ಉಡುಪಿ: ಹಳೆ ಮನೆ ರಿಪೇರಿ ವೇಳೆ ಗೋಡೆ ಕುಸಿತ : ಕಲ್ಲು ಬಿದ್ದು ವ್ಯಕ್ತಿ ದುರ್ಮರಣ

ಈ ವೇಳೆ ಕಡಿಯಾಳಿ ದೇವಸ್ಥಾನದ ಬಳಿ ಪರಿಚಯವಾದ ಸಿದ್ದಾರ್ಥ್ ಎಂಬ ವ್ಯಕ್ತಿ, “ನಮ್ಮ ತಾಯಿಗೂ ಇದೇ ಕಾಯಿಲೆ ಇತ್ತು, ಆಯುರ್ವೇದ ಚಿಕಿತ್ಸೆಯಿಂದ ಗುಣವಾಯಿತು” ಎಂದು ರೊನಾಲ್ಡ್ ಅವರನ್ನು ನಂಬಿಸಿದ್ದಾನೆ. ಬಳಿಕ ಚಿಕಿತ್ಸೆಯ ಹೆಸರಲ್ಲಿ ಮಾಧವ ಹಾಗೂ ಅನಿಲ್ ಎಂಬುವವರನ್ನು ಪರಿಚಯಿಸಿ ಹಂತ ಹಂತವಾಗಿ ಹಣ ಪೀಕಲು ಶುರು ಮಾಡಿದ್ದಾರೆ.

ವಂಚನೆಯ ಜಾಲ ಹೇಗಿತ್ತು?

ಮಾಧವ ಎಂಬಾತನ ಮಾತನ್ನು ನಂಬಿ ಗೂಗಲ್ ಪೇ ಮೂಲಕ ಅನಿಲ್ ಪವಾರ್ ಎಂಬಾತನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ನಂತರ ಎಟಿಎಂ ಮೂಲಕ 40,000 ರೂ. ನಗದನ್ನು ಸಿದ್ದಾರ್ಥ್‌ಗೆ ನೀಡಲಾಗಿತ್ತು. ಉಡುಪಿಯ ಮಾಂಡವಿ ಬಿಲ್ಡಿಂಗ್‌ನಲ್ಲಿರುವ ಆಯುರ್ವೇದ ಅಂಗಡಿಯೊಂದರಲ್ಲಿ ಭೇಟಿಯಾದ ವಂಚಕರು, ಔಷಧಿ ಹೆಸರಲ್ಲಿ ಒಟ್ಟು 10,80,000 ರೂಪಾಯಿ ಮೊತ್ತದ 4 ಚೆಕ್‌ಗಳನ್ನು ಬರೆಸಿಕೊಂಡಿದ್ದಾರೆ.

ಇದನ್ನೂ ಓದಿ : ಬ್ರಹ್ಮಾವರ: ಮನೆ ಕೆಲಸದ ನೆಪದಲ್ಲಿ 3.5 ಲಕ್ಷ ರೂ. ಚಿನ್ನ ದೋಚಿದ ಕೆಲಸದಾಕೆ

ಹಣ ಪಡೆದ ಬಳಿಕ‌ ಮೊಬೈಲ್ ಸ್ವಿಚ್ ಆಪ್

ವಂಚಕರು ಕೊಟ್ಟ ಆಯುರ್ವೇದ ಔಷಧಿಯನ್ನು ಪತ್ನಿಗೆ ನೀಡಿದರೂ ಯಾವುದೇ ಗುಣಮುಖವಾಗದಿದ್ದಾಗ, ರೊನಾಲ್ಡ್ ಅವರು ನೀಡಲಾಗಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದ್ದಾರೆ. ಆದರೆ ಎಲ್ಲಾ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು. ಅಷ್ಟರಲ್ಲಾಗಲೇ ತಾನು ವಂಚನೆಗೆ ಒಳಗಾಗಿರುವುದು ರೊನಾಲ್ಡ್ ಅವರಿಗೆ ಅರಿವಾಗಿದೆ.

ಪತ್ನಿಯ ಕಾಯಿಲೆ ಗುಣಪಡಿಸುವ ನಂಬಿಕೆ ದ್ರೋಹ ಎಸಗಿದ ಕಿಲಾಡಿಗಳ ವಿರುದ್ಧ ರೊನಾಲ್ಡ್ ಅವರು ದೂರು ನೀಡಿದ್ದು, ಸದ್ಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರೇ ನೆನಪಿಡಿ :

ಅಪರಿಚಿತರು ಆಸ್ಪತ್ರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಚಮತ್ಕಾರಿ ಔಷಧಿಗಳ ಬಗ್ಗೆ ಮಾಹಿತಿ ನೀಡಿದರೆ ನಂಬಬೇಡಿ. ಚಿಕಿತ್ಸೆಗೂ ಮುನ್ನ ವೈದ್ಯರ ಸಲಹೆ ಪಡೆಯಿರಿ ಹಾಗೂ ಹಣಕಾಸಿನ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories