ಕುಂದಾಪುರ : ಜಾಗದ ತಕರಾರು ನೆರೆಮನೆಯವನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ
"ಈ ಜಾಗ ನನ್ನದು, ಬೇಲಿ ಮುಟ್ಟಿದರೆ ನಿನ್ನನ್ನು ಕಡಿದು ಹಾಕುತ್ತೇನೆ" ಎಂದು ಬೆದರಿಕೆ ಹಾಕಿದ್ದಲ್ಲದೆ, ತಮ್ಮ ಬಳಿಯಿದ್ದ ಕತ್ತಿಯನ್ನು ತೋರಿಸಿ ಗಲಾಟೆ ಆರಂಭಿಸಿದ್ದಾರೆ.

ಕುಂದಾಪುರ : ಜಾಗದ ಗಡಿ ವಿಚಾರಕ್ಕೆ ಸಂಬಂಧಿಸಿದ ಸಣ್ಣ ವಿವಾದವೊಂದು ವಿಕೋಪಕ್ಕೆ ತಿರುಗಿ, ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಭೀಕರ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಗ್ರಾಮದಲ್ಲಿ ನಡೆದಿದೆ.
ಬೆಳ್ವೆ ಗ್ರಾಮದ ಮುರಳೀಧರ ಅಲ್ಸೆ (37 ವರ್ಷ ) ಎಂಬುವವರು ತಮ್ಮ ಜಾಗದ ಬೇಲಿ ಕಂಬವನ್ನು ಸರಿಪಡಿಸುತ್ತಿದ್ದಾಗ, ಅದೇ ಗ್ರಾಮದ ಪ್ರಕಾಶ್ ಅಲ್ಸೆ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಈ ಜಾಗ ನನ್ನದು, ಬೇಲಿ ಮುಟ್ಟಿದರೆ ನಿನ್ನನ್ನು ಕಡಿದು ಹಾಕುತ್ತೇನೆ” ಎಂದು ಬೆದರಿಕೆ ಹಾಕಿದ್ದಲ್ಲದೆ, ತಮ್ಮ ಬಳಿಯಿದ್ದ ಕತ್ತಿಯನ್ನು ತೋರಿಸಿ ಗಲಾಟೆ ಆರಂಭಿಸಿದ್ದಾರೆ.
ಮುರಳೀಧರ ಅವರು “ಜಾಗದ ಸಮಸ್ಯೆ ಇದ್ದರೆ ಸರ್ವೆ ಮಾಡಿಸೋಣ” ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕ್ರೋಶಗೊಂಡ ಪ್ರಕಾಶ್ ಅವರು ಮುರಳೀಧರ ಅವರ ಕುತ್ತಿಗೆಯ ಭಾಗಕ್ಕೆ ಕತ್ತಿಯಿಂದ ಬೀಸಿದ್ದಾರೆ. ತಕ್ಷಣ ಎಚ್ಚೆತ್ತ ಮುರಳೀಧರ ಅವರು ಎಡಗೈಯನ್ನು ಅಡ್ಡ ಹಿಡಿದ ಕಾರಣ, ಕೈಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಘಟನೆಯನ್ನು ಕಂಡು ಮುರಳೀಧರ ಅವರ ಪತ್ನಿ ವೈಶಾಲಿ ಅವರು ಕಿರುಚುತ್ತಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇದನ್ನು ಕಂಡು ಹೆದರಿದ ಆರೋಪಿ ಪ್ರಕಾಶ್, ಕತ್ತಿಯನ್ನು ಅಲ್ಲೇ ಎಸೆದು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಗಾಯಾಳುವನ್ನು ತಕ್ಷಣ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಗಾಯ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರಕಾಶ್ ಅಲ್ಸೆ ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.



