ಟಾಟಾ, ಮಹೀಂದ್ರಾಗೆ ಬಂಪರ್‌ ಸಕ್ಸಸ್‌! ಏಪ್ರಿಲ್‌ನಲ್ಲಿ ಈವಿ ಮಾರಾಟ ಜೋರು

ದೇಶಾದ್ಯಂತ ಎಲೆಕ್ಟ್ರಿಕ್‌ ವಾಹನಗಳ ಖರೀದಿ ವೇಗವಾಗಿ ಹೆಚ್ಚುತ್ತಿದ್ದು, ಏಪ್ರಿಲ್‌ ತಿಂಗಳಲ್ಲಿ ಈವಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಮಾರಾಟ ದಾಖಲೆ ಮಟ್ಟ ತಲುಪಿದೆ ಎಂದು ಫಾಡಾ ವರದಿ ತಿಳಿಸಿದೆ.

ಇಂಧನ ದರಗಳ ಏರಿಕೆ ಮತ್ತು ಪರಿಸರ ಸ್ನೇಹಿ ವಾಹನಗಳ ಮೇಲಿನ ಆಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಉತ್ತಮ ಮಾರಾಟ ಕಾಣುತ್ತಿದ್ದ ಈವಿ ಪ್ಯಾಸಿಂಜರ್‌ ವಾಹನಗಳು ಏಪ್ರಿಲ್‌ ತಿಂಗಳಲ್ಲೂ ಹೊಸ ದಾಖಲೆ ನಿರ್ಮಿಸಿವೆ.

ಆಟೋಮೊಬೈಲ್‌ ಡೀಲರ್‌ಗಳ ಸಂಘಟನೆ ಫಾಡಾ ಬಿಡುಗಡೆ ಮಾಡಿದ ವರದಿ ಪ್ರಕಾರ, ಏಪ್ರಿಲ್‌ನಲ್ಲಿ ದೇಶಾದ್ಯಂತ 23,506 ಎಲೆಕ್ಟ್ರಿಕ್‌ ಪ್ಯಾಸಿಂಜರ್‌ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 13,421 ಯುನಿಟ್‌ಗಳು ಮಾತ್ರ ಮಾರಾಟವಾಗಿದ್ದರೆ, ಈ ಬಾರಿ ಸುಮಾರು 75 ಶೇಕಡಕ್ಕೂ ಹೆಚ್ಚು ಏರಿಕೆ ಕಂಡುಬಂದಿದೆ.

ಈ ವಿಭಾಗದಲ್ಲಿ ಟಾಟಾ ಮೋಟಾರ್ಸ್‌ ಮುಂಚೂಣಿಯಲ್ಲಿದ್ದು, ಕಳೆದ ತಿಂಗಳಲ್ಲಿ 8,543 ಈವಿ ಕಾರುಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷದ ಹೋಲಿಕೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಮಹೀಂದ್ರಾ ಅಂಡ್‌ ಮಹೀಂದ್ರಾ ಕೂಡ 5,413 ಯುನಿಟ್‌ಗಳ ಮಾರಾಟ ದಾಖಲಿಸಿದ್ದು, ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ. ಜೇಎಸ್‌ಡಬ್ಲ್ಯು ಎಂಜಿ ಮೋಟರ್‌ ಸಹ ಸುಮಾರು 5 ಸಾವಿರ ವಾಹನಗಳನ್ನು ಮಾರಾಟ ಮಾಡಿ ಉತ್ತಮ ಪ್ರದರ್ಶನ ನೀಡಿದೆ.

ಕೇವಲ ಕಾರುಗಳಲ್ಲ, ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಮೇಲೂ ಗ್ರಾಹಕರ ಆಸಕ್ತಿ ಹೆಚ್ಚುತ್ತಿದೆ. ಏಪ್ರಿಲ್‌ ತಿಂಗಳಲ್ಲಿ ದೇಶಾದ್ಯಂತ 1,48,740 ಈವಿ ಬೈಕ್‌ ಮತ್ತು ಸ್ಕೂಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಹೋಲಿಕೆಯಲ್ಲಿ ಇದು ಸುಮಾರು 60 ಶೇಕಡಾ ಹೆಚ್ಚಳವಾಗಿದೆ.

ಟಿವಿಎಸ್‌ ಮೋಟಾರ್‌ ಕಂಪನಿ 37,683 ಯುನಿಟ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನದಲ್ಲಿದ್ದರೆ, ಬಜಾಜ್‌ ಆಟೋ 32,898 ಯುನಿಟ್‌ಗಳು ಮತ್ತು ಏಥರ್‌ ಎನರ್ಜಿ 27,034 ಯುನಿಟ್‌ಗಳನ್ನು ಮಾರಾಟ ಮಾಡಿವೆ. ನಗರ ಪ್ರದೇಶಗಳಲ್ಲಿ ಕಡಿಮೆ ಖರ್ಚಿನ ಸಂಚಾರದ ಅಗತ್ಯದಿಂದ ಜನರು ಹೆಚ್ಚಾಗಿ ಈವಿ ವಾಹನಗಳತ್ತ ಮುಖ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇದೇ ವೇಳೆ ಎಲೆಕ್ಟ್ರಿಕ್‌ ತ್ರಿಚಕ್ರ ವಾಹನಗಳ ಮಾರಾಟವೂ 64,549 ಯುನಿಟ್‌ಗಳಿಗೆ ತಲುಪಿದೆ. ವಾಣಿಜ್ಯ ಬಳಕೆಯ ಈವಿ ವಾಹನಗಳ ಸಂಖ್ಯೆಯೂ ದ್ವಿಗುಣವಾಗಿ 2,245 ಯುನಿಟ್‌ಗಳಿಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈವಿ ಮಾರುಕಟ್ಟೆ ಇನ್ನಷ್ಟು ವೇಗ ಪಡೆಯುವ ಸಾಧ್ಯತೆ ಇದೆ ಎಂದು ವಾಹನ ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories