ತೂಕ ಹೆಚ್ಚಾಗುವ ಭಯದಿಂದ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ ; ಆದರೆ ಈ ಒಂದು ಕೆಲಸ ತಪ್ಪದೇ ಮಾಡಿ

ಕೆಲವರು ತೂಕ ಇಳಿಸುವ ಉದ್ದೇಶದಿಂದ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ ಅನ್ನ ಸಮತೋಲಿತ ಆಹಾರದ ಭಾಗ ಎಂದು ಆಹಾರ ತಜ್ಞರು ಹೇಳುತ್ತಾರೆ. ಹಾಗಾದರೆ ಅನ್ನವನ್ನು ಯಾವ ರೀತಿ ಸೇವಿಸಿದರೆ ವರದಾನವಾಗಬಲ್ಲದು? ಇಲ್ಲಿದೆ ಓದಿ.

ಇಂದಿನ ದಿನಗಳಲ್ಲಿ ಬೊಜ್ಜು ಅಥವಾ ಸ್ಥೂಲಕಾಯ ಎಂಬುದು ಬಹು ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ವಯೋಮಾನದವರು ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಭಾರತದಲ್ಲಿ ಶೇಕಡಾ 24 ಜನರು ಸ್ಥೂಲಕಾಯವನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತದೆ. ಈ ಸಮಸ್ಯೆಯಿಂದ ಹೊರಬರಲು ಹಲವಾರು ಜನರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಕೆಲವರು ವ್ಯಾಯಾಮ, ಯೋಗ, ಕಟ್ಟುನಿಟ್ಟಿನ ಆಹಾರಪದ್ಧತಿ ಹೀಗೆ ಮುಂತಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ತೂಕ ಕಳೆದಕೊಳ್ಳಬೇಕು ಎಂದು ಅನ್ನವನ್ನೇ ಸಂಪೂರ್ಣವಾಗಿ ತ್ಯಜಿಸಿದವರೂ ಇದ್ದಾರೆ. ಆದರೆ ಅನ್ನ ಭಾರತದ ಪುರಾತನ ಆಹಾರ ಪದ್ಧತಿ. ಅದರಿಂದ ತೂಕ ಗಣನೀಯವಾಗಿ ಏರುವುದಿಲ್ಲ ಎಂದು ಪೌಷ್ಠಿಕಾಂಶ ತಜ್ಞರು ಹೇಳುತ್ತಾರೆ. ಇದೊಂದು ಸಮತೋಲಿತ ಆಹಾರದ ಭಾಗ. ಉತ್ತಮ ಆರೋಗ್ಯಕ್ಕೆ ಅನ್ನವು ಮುಖ್ಯ ಎಂದು ಹೇಳುತ್ತಾರೆ.

ಅನ್ನದಲ್ಲೇನಿದೆ?

ಅಕ್ಕಿ ವಿಶ್ವದಲ್ಲಿ ವ್ಯಾಪಕವಾಗಿ ಸೇವಿಸುವ ಧಾನ್ಯ. ಇದು ದೇಹಕ್ಕೆ ಅಗತ್ಯವಿರುವ 15 ಕ್ಕೂ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ. ವಿಟಮಿನ್‌ ಬಿ, ಮೆಗ್ನೀಸಿಯಮ್‌, ರಂಜಕ, ಮತ್ತು ಸೆಲೆನಿಯಮ್‌ನಂತಹ ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಇದು ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಜೀರ್ಣವಾಗುತ್ತವೆ. ಇದರಿಂದ ಹಂತ ಹಂತವಾಗಿ ಶಕ್ತಿಯ ಬಿಡುಗಡೆಯಾಗುತ್ತದೆ. ಹಸಿವನ್ನು ದೀರ್ಘಕಾಲದವರೆಗೆ ತಡೆಹಿಡಿಯುತ್ತದೆ. ಗೋಧಿ, ಬಾರ್ಲಿಯಲ್ಲಿ ಕಂಡುಬರುವ ಗ್ಲುಟನ್‌ ಕೆಲವರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಅಕ್ಕಿ ಹಾಗಲ್ಲ, ಇದು ಸಂಪೂರ್ಣ ಗ್ಲುಟನ್‌ ರಹಿತವಾಗಿದೆ.

ಇದನ್ನೂ ಓದಿ : ಬುದ್ಧಿ ವರ್ಧಕ ಬಾದಾಮಿ : ಪ್ರತಿದಿನ 4 ರಿಂದ 5 ಬಾದಾಮಿ ತಿನ್ನುವುದರಿಂದ ಏನೆಲ್ಲಾ ಲಾಭ?

ಅಕ್ಕಿಯನ್ನು ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ವರದಾನ

ಅಕ್ಕಿ ಕೈಗಟಕುವ ದರದಲ್ಲಿ ಸಿಗುವ ಆಹಾರ ಪದಾರ್ಥ. ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಸುಲಭವಾಗಿ ದೊರೆಯವ ಧಾನ್ಯ. ಇದನ್ನು ಸುಲಭವಾಗಿ ಬೇಯಿಸಬಹುದು. ಇದನ್ನು ಎಲ್ಲಾ ಬಗೆಯ ಪಾಕವಿಧಾನಗಳೊಂದಿಗೆ ಸೇರಿಸಿಕೊಳ್ಳಬಹುದಾಗಿದೆ. ಅಕ್ಕಿ ಆರೋಗ್ಯಕರ ಆಹಾರದ ಭಾಗವಾಗಲು, ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಅದರೊಟ್ಟಿಗೆ ದ್ವಿದಳ ಧಾನ್ಯಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಅಕ್ಕಿಯ ಪ್ರಮಾಣ ಕಡಿಮೆಯಿದ್ದು ಉಳಿದ ಪದಾರ್ಥಗಳು ಹೆಚ್ಚಿರಬೇಕು. ಆಗ ಅಕ್ಕಿ ತೂಕ ಇಳಿಕೆಗೆ ವರದಾನವಾಗಬಲ್ಲದು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories