
ತುಮಕೂರು ಜಿಲ್ಲೆಯ ಶಿರಾ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ವಿಚಿತ್ರ ಹಾಗೂ ಆತಂಕಕಾರಿ ಘಟನೆ ರಾಜ್ಯದ ಗಮನ ಸೆಳೆದಿದೆ. ಪ್ರೇಯಸಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಯುವಕ ಕೊನೆಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲವೇ ಕ್ಷಣಗಳ ಅಂತರದಲ್ಲಿ ಯುವತಿ ಮತ್ತು ಕಾರು ಚಾಲಕ ಕಾರಿನಿಂದ ಹೊರಬಂದಿದ್ದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ನಾಗೇಂದ್ರ ಮತ್ತು ರಮ್ಯಾ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಇಬ್ಬರ ನಡುವೆ ಮದುವೆ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಬಳಿಕ ಯುವತಿ ಸಂಬಂಧ ಮುಂದುವರಿಸಲು ನಿರಾಕರಿಸಿದ್ದರಿಂದ ನಾಗೇಂದ್ರ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಘಟನೆ ನಡೆದ ದಿನ ನಾಗೇಂದ್ರ ಬಾಡಿಗೆ ಕಾರು ಬುಕ್ ಮಾಡಿ ಬೆಂಗಳೂರಿನಲ್ಲಿದ್ದ ಯುವತಿಯನ್ನು ಬಲವಂತವಾಗಿ ಕರೆದುಕೊಂಡು ಹೊರಟಿದ್ದಾನೆ. ಈ ಕುರಿತು ಯುವತಿಯ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ವಾಹನದ ಚಲನವಲನದ ಮೇಲೆ ನಿಗಾ ಇಟ್ಟಿದ್ದರು.
ಶಿರಾ ಮಾರ್ಗದಲ್ಲಿ ಸಾಗುತ್ತಿದ್ದ ವೇಳೆ ಕಾರಿನೊಳಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನಾಗೇಂದ್ರ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಅಪಾಯ ಅರಿತ ಯುವತಿ ಧೈರ್ಯದಿಂದ ಚಲಿಸುತ್ತಿದ್ದ ಕಾರಿನಿಂದ ಹೊರಗೆ ಜಿಗಿದು ತನ್ನ ಜೀವ ಉಳಿಸಿಕೊಂಡಿದ್ದಾಳೆ. ಆಕೆಯ ರಕ್ಷಣೆಗೆ ಕಾರು ಚಾಲಕ ಕೂಡ ತಕ್ಷಣ ಮುಂದಾಗಿದ್ದಾನೆ.
ಯುವತಿ ಸುರಕ್ಷಿತವಾಗಿ ಹೊರಬಂದ ತಕ್ಷಣ ನಾಗೇಂದ್ರ ಕಾರಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ತನ್ನೊಂದಿಗೆ ತಂದಿದ್ದ ನಾಡಬಾಂಬ್‌ಗೆ ಬೆಂಕಿ ಹಚ್ಚಿದ್ದಾನೆ. ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾರು ಚಾಲಕ ಪ್ರವೀಣ್ ನೀಡಿರುವ ಮಾಹಿತಿ ಪ್ರಕಾರ, ಯುವತಿ ಕಾರಿನಲ್ಲಿ ಸ್ಫೋಟಕ ಇರುವ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದಳು. ಒಂದು ಬಾಂಬ್‌ನ್ನು ದೂರ ಎಸೆದರೂ ಮತ್ತೊಂದು ಸ್ಫೋಟಕವನ್ನು ನಾಗೇಂದ್ರ ಸ್ಫೋಟಿಸಿದ್ದಾನೆ. ಇದರಿಂದ ತಾನು ಅಲ್ಲಿಂದ ದೂರ ಸರಿದು ಪ್ರಾಣ ಉಳಿಸಿಕೊಂಡೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ. ಅಪಹರಣ, ಹಲ್ಲೆ ಮತ್ತು ಸ್ಫೋಟಕ ಬಳಕೆ ಸೇರಿದಂತೆ ಹಲವು ಪ್ರಕರಣಗಳಡಿ ತನಿಖೆ ಮುಂದುವರಿದಿದೆ.



