ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ! ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಸಾಧ್ಯತೆ
ದೇಶದಲ್ಲಿ ಕಚ್ಚಾ ವಸ್ತು ಮತ್ತು ಪ್ಯಾಕೇಜಿಂಗ್ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನೆಲೆ, ದಿನನಿತ್ಯ ಬಳಕೆಯ ಹಲವು ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಎದುರಾಗಿ ಜನರ ಚಿಂತೆ ಹೆಚ್ಚಿಸಿದೆ.

Essential Items Price Hike: ಸಾಮಾನ್ಯ ಜನರ ಬದುಕಿನ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಇಂಧನ ದರ ಏರಿಕೆಯ ಆತಂಕದಲ್ಲಿರುವ ಜನರಿಗೆ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಹೊಸ ಹೊರೆ ತರಬಹುದಾಗಿದೆ.
ದೇಶದ ಪ್ರಮುಖ FMCG ಕಂಪನಿಗಳು ತಮ್ಮ ಉತ್ಪನ್ನಗಳ ದರ ಹೆಚ್ಚಿಸುವ ಸುಳಿವು ನೀಡಿವೆ. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆ, ಸಾಗಣೆ ವೆಚ್ಚ ಮತ್ತು ಪ್ಯಾಕೇಜಿಂಗ್ ಖರ್ಚಿನ ಪರಿಣಾಮ ಕಂಪನಿಗಳ ಮೇಲೂ ಒತ್ತಡ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚು ಹಣ ಖರ್ಚು ಮಾಡಬೇಕಾಗುವ ಸಾಧ್ಯತೆ ಇದೆ.
Dabur India ಸೇರಿದಂತೆ ಹಲವು ದೊಡ್ಡ ಕಂಪನಿಗಳು ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಇದೇ ಹಾದಿಯಲ್ಲಿ Hindustan Unilever, Nestle ಮತ್ತು Britannia Industries ಕೂಡ ಸಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತಿವೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯೂ ಬೆಲೆ ಏರಿಕೆಗೆ ಕಾರಣವಾಗಿದೆ. ವಿಶೇಷವಾಗಿ ಕಚ್ಚಾ ತೈಲ ಸರಬರಾಜಿನಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆ ಸಾಗಣೆ ವೆಚ್ಚವನ್ನು ಹೆಚ್ಚಿಸಿದೆ. ಇದರ ಪರಿಣಾಮ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆಯ ಮೇಲೂ ಕಾಣಿಸುತ್ತಿದೆ.
ಬಿಸ್ಕಟ್, ಅಡುಗೆ ಎಣ್ಣೆ, ಹಾಲು, ಚಹಾ ಪುಡಿ, ಕಾಫಿ ಸೇರಿದಂತೆ ಹಲವು ಉತ್ಪನ್ನಗಳಿಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಕಂಪನಿಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದರಿಂದ ಬೆಲೆ ಏರಿಕೆ ಅನಿವಾರ್ಯವಾಗುತ್ತಿದೆ ಎಂದು ಉದ್ಯಮ ವಲಯ ಹೇಳುತ್ತಿದೆ.
ಇನ್ನೊಂದೆಡೆ ಗ್ರಾಮೀಣ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತೆ ಹೆಚ್ಚುತ್ತಿರುವುದು ಕಂಪನಿಗಳಿಗೆ ಲಾಭದಾಯಕವಾದರೂ, ವೆಚ್ಚ ಏರಿಕೆಯ ಹೊರೆ ತಗ್ಗಿಸಲು ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸಾಬೂನು, ಶ್ಯಾಂಪು, ಟೂತ್ಪೇಸ್ಟ್, ಡಿಟರ್ಜೆಂಟ್ ಸೇರಿದಂತೆ ವೈಯಕ್ತಿಕ ಬಳಕೆಯ ವಸ್ತುಗಳ ಜೊತೆಗೆ ಬಿಸ್ಕಟ್, ಸ್ನ್ಯಾಕ್ಸ್, ನೂಡಲ್ಸ್, ಚಾಕೊಲೇಟ್ಗಳ ಬೆಲೆಯೂ ಏರಬಹುದು ಎಂದು ಅಂದಾಜಿಸಲಾಗಿದೆ. ಹಾಲು, ಕಾಫಿ, ಟೀ ಹಾಗೂ ಸಾಫ್ಟ್ ಡ್ರಿಂಕ್ಸ್ಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.
ವರ್ಷಾ ಅಭಾವ ಎದುರಾದರೆ ಆಹಾರ ದ್ರವ್ಯೋಲ್ಬಣ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಇದರಿಂದ ಈಗಾಗಲೇ ಗೃಹ ಬಜೆಟ್ ನಿಭಾಯಿಸಲು ಹೋರಾಡುತ್ತಿರುವ ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರಿಗೆ ಮತ್ತಷ್ಟು ಆರ್ಥಿಕ ಒತ್ತಡ ಎದುರಾಗುವ ಸಾಧ್ಯತೆ ಇದೆ.



