ಬೆಳ್ಳಿ ಬೆಲೆ ಭಾರೀ ಜಿಗಿತ! ವಾರದಲ್ಲೇ ₹55 ಸಾವಿರ ಏರಿಕೆ, ಅಚ್ಚರಿಯ ಮಟ್ಟಕ್ಕೆ ಹೆಚ್ಚಳ
ಅಂತಾರಾಷ್ಟ್ರೀಯ ಉದ್ವಿಗ್ನತೆ ಮತ್ತು ಯುದ್ಧ ಭೀತಿಯ ನಡುವೆ ಬೆಳ್ಳಿ ಬೆಲೆ ಅಚ್ಚರಿಯ ಮಟ್ಟಕ್ಕೆ ಏರಿಕೆಯಾಗಿದೆ. ಕೇವಲ ಒಂದು ವಾರದಲ್ಲೇ ಲಕ್ಷಾಂತರ ರೂಪಾಯಿ ಏರಿಕೆಯಿಂದ ಹೂಡಿಕೆದಾರರು ಹಾಗೂ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿ ತೀವ್ರವಾಗುತ್ತಿರುವ ನಡುವೆಯೇ ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕಾ ಉದ್ವಿಗ್ನತೆ ಇದೀಗ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಮೇಲೂ ದೊಡ್ಡ ಪರಿಣಾಮ ಬೀರಿದೆ.
ಮೇ 13ರ ವಹಿವಾಟಿನಲ್ಲಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇವಲ ಒಂದು ದಿನದಲ್ಲೇ ಬೆಳ್ಳಿ ದರವು ಸುಮಾರು ₹20 ಸಾವಿರದಷ್ಟು ಹೆಚ್ಚಳ ಕಂಡಿದೆ. ಇನ್ನು ಕಳೆದ ಒಂದು ವಾರದ ಅಂಕಿ-ಅಂಶ ನೋಡಿದರೆ ಬೆಳ್ಳಿ ಬೆಲೆ ₹55 ಸಾವಿರದವರೆಗೆ ಏರಿಕೆ ಕಂಡಿರುವುದು ಗಮನ ಸೆಳೆಯುತ್ತಿದೆ.
ಮೇ 5ರಂದು ಒಂದು ಕಿಲೋ ಬೆಳ್ಳಿ ಬೆಲೆ ಸುಮಾರು ₹2.55 ಲಕ್ಷದಷ್ಟಿದ್ದರೆ, ಈಗ ಅದು ₹3.10 ಲಕ್ಷದ ಗಡಿ ದಾಟಿದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಮತ್ತಷ್ಟು ಏರಿಕೆಯಾಗಿ ₹3.30 ಲಕ್ಷದವರೆಗೆ ವಹಿವಾಟು ನಡೆಯುತ್ತಿದೆ. ಪ್ರಸ್ತುತ 10 ಗ್ರಾಂ ಬೆಳ್ಳಿ ದರ ₹3,100ರ ಸುತ್ತಮುತ್ತ ದಾಖಲಾಗಿದೆ.
ಚಿನ್ನದ ಬೆಲೆಯೂ ಇದೇ ವೇಳೆ ಭಾರೀ ಏರಿಕೆ ಕಂಡಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಯಲ್ಲಿ ಎಚ್ಚರಿಕೆ ವಹಿಸುವಂತೆ ಜನರಿಗೆ ಮನವಿ ಮಾಡಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಇರಾನ್ ಮತ್ತು ಅಮೆರಿಕಾ ನಡುವಿನ ನೇರ ಉದ್ವಿಗ್ನತೆ, ಜೊತೆಗೆ ಹಾರ್ಮುಜ್ ಜಲಸಂಧಿ ಮೂಲಕ ನಡೆಯುವ ತೈಲ ಸಾಗಣೆಯಲ್ಲಿ ಎದುರಾಗುತ್ತಿರುವ ಅಡಚಣೆಗಳು ಜಾಗತಿಕ ಆರ್ಥಿಕತೆಯನ್ನು ಕಂಗಾಲು ಮಾಡಿವೆ. ವಿಶ್ವದ ಸುಮಾರು 20 ಶೇಕಡಾ ತೈಲ ಸರಬರಾಜು ಇದೇ ಮಾರ್ಗದಿಂದ ಸಾಗುವುದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಪರಿಣಾಮವೇ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಎಂದು ವಿಶ್ಲೇಷಿಸಲಾಗಿದೆ.



