ಕೋಟ : ಸಾಲದ ಆಸ್ತಿ ಹರಾಜು ಹಾಕಿದ್ದಕ್ಕೆ ಸಹಕಾರಿ ಬ್ಯಾಂಕ್ ಸಿಇಒಗೆ ಬೈದು ವಿಡಿಯೋ ವೈರಲ್ ಮಾಡಿದ ಗ್ರಾಹಕ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ನಿವಾಸಿ ಪಾರ್ವತಿ ಎಂ. ಎಂಬವರು ತಮ್ಮ ಮೇಲಿನ ಹಲ್ಲೆಯ, ವಿಡಿಯೋ ಹರಿಬಿಟ್ಟ ಕುರಿತು ಕೋಟ ಠಾಣೆಯ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಕೋಟ : ಸಾಲ ತೀರಿಸದ ಕಾರಣಕ್ಕೆ ಅಡಮಾನ ಇರಿಸಿದ್ದ ಆಸ್ತಿಯನ್ನು ಏಲಂ ಮಾಡಿದ ವಿಚಾರಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಬ್ಯಾಂಕ್ ಕಚೇರಿಗೆ ನುಗ್ಗಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ದ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ನಿವಾಸಿ ಪಾರ್ವತಿ ಎಂ. ಎಂಬವರು ತಮ್ಮ ಮೇಲಿನ ಹಲ್ಲೆಯ, ವಿಡಿಯೋ ಹರಿಬಿಟ್ಟ ಕುರಿತು ಕೋಟ ಠಾಣೆಯ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಸಾಲ ಕಟ್ಟದಿದ್ದಕ್ಕೆ ಕೋರ್ಟ್ ಆದೇಶದಂತೆ ಆಸ್ತಿ ಹರಾಜು!
ಆರೋಪಿ ಪ್ರವೀಣ ಕುಲಾಲ್ ಎಂಬಾತ ಮೊಳಹಳ್ಳಿ ಸಹಕಾರಿ ಸಂಘದಲ್ಲಿ ತನ್ನ ಆಸ್ತಿಯನ್ನು ಅಡಮಾನವಾಗಿ ಇಟ್ಟು ಸಾಲ ಪಡೆದುಕೊಂಡಿದ್ದ. ಆದರೆ ಸಾಲವನ್ನು ದೀರ್ಘಕಾಲದ ವರೆಗೂ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಸಂಘದ ವತಿಯಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರ (ARCS) ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಈ ಪ್ರಕರಣದಲ್ಲಿ ಬ್ಯಾಂಕ್ ಪರವಾಗಿ ತೀರ್ಪು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್ 29 ರಂದು ಸಹಕಾರ ಸಂಘಗಳ ಮಾರಾಟಾಧಿಕಾರಿಗಳು ಸಾಲಕ್ಕೆ ಅಡಮಾನ ಇರಿಸಿದ್ದ ಪ್ರವೀಣ್ ಕುಲಾಲ್ನ ಆಸ್ತಿಯನ್ನು ಕಾನೂನುಬದ್ಧವಾಗಿ ಏಲಂ ಪ್ರಕ್ರಿಯೆ ನಡೆಸಿದ್ದರು.
ಬ್ಯಾಂಕ್ಗೆ ನುಗ್ಗಿ ದಾಂಧಲೆ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಪ್ರವೀಣ್ ಕುಲಾಲ್ ತನ್ನ ಆಸ್ತಿ ಹರಾಜಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಆಕ್ರೋಶಗೊಂಡು, ಜೂನ್ 30 ರಂದು ಬೆಳಗ್ಗೆ 11.30ರ ಸುಮಾರಿಗೆ ಸಹಕಾರಿ ಸಂಘದ ಕಚೇರಿಗೆ ನುಗ್ಗಿದ್ದಾನೆ. ತನ್ನ ಜಾಗ ಏಲಂ ಮಾಡಿರುವ ವಿಚಾರವಾಗಿ ಸಿಇಓ ಪಾರ್ವತಿ ಹಾಗೂ ಬ್ಯಾಂಕ್ನ ಸಿಬ್ಬಂಧಿಗಳ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೇ, ಸಹಕಾರಿ ಸಂಘದ ಕಚೇರಿಯ ಒಳಗೆ ಮೊಬೈಲ್ನಲ್ಲಿ ಅವಹೇಳನಕಾರಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಬ್ಯಾಂಕಿನ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೊಳಹಳ್ಳಿ ಸಹಕಾರಿ ಸಂಘದ ಸಿಇಒ ಪಾರ್ವತಿ ಎಂ. ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
kota molahall cooperative society ceo abused property auction viral videocase

