ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟ, 74 ಜನರ ದುರ್ಮರಣ! ಜನಜೀವನ ಅಸ್ತವ್ಯಸ್ತ

ಸಿಡಿಲು, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಉತ್ತರ ಪ್ರದೇಶದ ಹಲವು ಜಿಲ್ಲೆಗಳು ತತ್ತರಿಸಿದ್ದು, ಜನರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆಡಳಿತವನ್ನು ಕಂಗಾಲು ಮಾಡಿದೆ.

  • 80-100 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿ
  • ವಿದ್ಯುತ್ ವ್ಯತ್ಯಯ, ರಸ್ತೆ ಸಂಚಾರ ಅಸ್ತವ್ಯಸ್ತ
  • ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಉತ್ತರ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಭಾರೀ ಅನಾಹುತ ಸೃಷ್ಟಿಸಿದೆ. ಬುಧವಾರ ಮಧ್ಯಾಹ್ನ ಆರಂಭವಾದ ಬಿರುಗಾಳಿ ಮತ್ತು ಮಳೆ ಸಂಜೆ ವೇಳೆಗೆ ಭೀಕರ ಚಂಡಮಾರುತದ ರೂಪ ಪಡೆದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೀವಹಾನಿ ಉಂಟುಮಾಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಗೋಡೆ ಕುಸಿತ, ಮರಗಳು ಉರುಳಿ ಬೀಳುವುದು ಮತ್ತು ಸಿಡಿಲು ಬಡಿದ ಪರಿಣಾಮ ಇದುವರೆಗೆ 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ 17 ಮಂದಿ ಮೃತಪಟ್ಟಿದ್ದರೆ, ಭದೋಹಿಯಲ್ಲಿ 10 ಹಾಗೂ ಫತೇಪುರ್‌ನಲ್ಲಿ 8 ಸಾವುಗಳು ವರದಿಯಾಗಿವೆ. ಉನ್ನಾವ್ ಜಿಲ್ಲೆಯಲ್ಲಿ ಬಾಲಕ ಸೇರಿ 7 ಮಂದಿ ದುರ್ಮರಣ ಹೊಂದಿದ್ದಾರೆ.

ಬಿರುಗಾಳಿಯ ಅಬ್ಬರಕ್ಕೆ ಅನೇಕ ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಹಲವು ಪ್ರದೇಶಗಳಲ್ಲಿ ಕರೆಂಟ್ ಸರಬರಾಜು ಸ್ಥಗಿತಗೊಂಡಿದೆ. ರಸ್ತೆಗಳಲ್ಲಿ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಹವಾಮಾನ ಇಲಾಖೆ ಲಖನೌ, ಸೀತಾಪುರ, ಉನ್ನಾವ್ ಮತ್ತು ಪ್ರಯಾಗ್‌ರಾಜ್ ಸೇರಿ 38 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಕೆಲವು ಗಂಟೆಗಳಲ್ಲೂ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳಿಗೆ ತುರ್ತು ನೆರವು ಒದಗಿಸುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದೆ. ಮೇ 15ರಿಂದ ಮತ್ತೆ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories