ಬ್ಯಾಂಕ್ ಸೇವೆಗಳಲ್ಲಿ ಆರು ದಿನ ವ್ಯತ್ಯಯ! ಸತತ ಆರು ದಿನ ಬ್ಯಾಂಕ್‌ ರಜೆ

ವಾರಾಂತ್ಯ ರಜೆ, ಎಸ್‌ಬಿಐ ನೌಕರರ ಮುಷ್ಕರ ಹಾಗೂ ಬಕ್ರೀದ್ ಹಬ್ಬದ ಹಿನ್ನೆಲೆ ಕೆಲ ಭಾಗಗಳಲ್ಲಿ ಬ್ಯಾಂಕ್ ಸೇವೆಗಳು ಹಲವು ದಿನಗಳ ಕಾಲ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಿಕೊಳ್ಳಬೇಕು.

ಈ ತಿಂಗಳಲ್ಲಿ ಕೆಲ ದಿನಗಳ ಕಾಲ ಬ್ಯಾಂಕ್ ಶಾಖೆಗಳು ನಿರಂತರವಾಗಿ ಮುಚ್ಚಲಿರುವುದರಿಂದ ಗ್ರಾಹಕರು ತುರ್ತು ಕೆಲಸಗಳನ್ನು ಮುಂಚಿತವಾಗಿಯೇ ಮುಗಿಸಿಕೊಳ್ಳುವುದು ಉತ್ತಮ ಎಂದು ಸೂಚಿಸಲಾಗಿದೆ.

ಎಸ್‌ಬಿಐ ನೌಕರರ ಸಂಘವು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಉದ್ಯೋಗಿಗಳ ನೇಮಕಾತಿ, ಔಟ್‌ಸೋರ್ಸಿಂಗ್ ಸಿಬ್ಬಂದಿ ಸಮಸ್ಯೆ, ಕರಿಯರ್ ಗ್ರೋತ್ ಹಾಗೂ HRMS ಸಂಬಂಧಿತ ವಿಚಾರಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಮೇ 25 ಮತ್ತು 26ರಂದು ಮುಷ್ಕರ ನಡೆಯಲಿದೆ.

ಇದರ ಮೊದಲು ಮೇ 23ರಂದು ನಾಲ್ಕನೇ ಶನಿವಾರದ ರಜೆ ಹಾಗೂ ಮೇ 24ರಂದು ಭಾನುವಾರದ ಕಾರಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳಲ್ಲಿ ಸೇವೆ ಲಭ್ಯವಿರುವುದಿಲ್ಲ.

ಇದಕ್ಕೆ ಜೊತೆಗೆ ಕೆಲ ರಾಜ್ಯಗಳಲ್ಲಿ ಬಕ್ರೀದ್ ಅಥವಾ ಈದ್-ಉಲ್-ಅಧಾ ಹಬ್ಬದ ರಜೆಗಳು ಮೇ 27 ಮತ್ತು 28ರಂದು ಇರಲಿವೆ. ವಿಶೇಷವಾಗಿ ಜಮ್ಮು-ಕಾಶ್ಮೀರ ಭಾಗದಲ್ಲಿ ಎರಡು ದಿನಗಳ ಹಬ್ಬದ ಆಚರಣೆಯ ಹಿನ್ನೆಲೆ ಎಸ್‌ಬಿಐ ಶಾಖೆಗಳು ನಿರಂತರವಾಗಿ ಆರು ದಿನಗಳ ಕಾಲ ಮುಚ್ಚುವ ಸಾಧ್ಯತೆ ಇದೆ.

ಪಾಸ್‌ಬುಕ್ ಅಪ್‌ಡೇಟ್, ಚೆಕ್ ಕ್ಲಿಯರೆನ್ಸ್, ಲಾಕರ್ ಸೇವೆ, ನಗದು ಠೇವಣಿ ಹಾಗೂ ಸಾಲದ ದಾಖಲೆ ಸಲ್ಲಿಕೆ ಸೇರಿದಂತೆ ಶಾಖೆ ಆಧಾರಿತ ಕೆಲಸಗಳಿಗೆ ತಾತ್ಕಾಲಿಕ ವ್ಯತ್ಯಯ ಉಂಟಾಗಬಹುದು. ಆದ್ದರಿಂದ ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ಸ್ಥಳೀಯ ರಜೆ ಮಾಹಿತಿ ಪರಿಶೀಲಿಸುವುದು ಸೂಕ್ತ.

ಆದರೆ ನೆಟ್ ಬ್ಯಾಂಕಿಂಗ್, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಆನ್‌ಲೈನ್ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories