ವಾಹಿನಿಗಳ ಜಾಹೀರಾತು ಅಬ್ಬರಕ್ಕೆ ಬ್ರೇಕ್ : ವೀಕ್ಷಕರಿಗೆ ಬಿಗ್ ರಿಲೀಫ್
ಟೆಲಿವಿಷನ್ ವಾಹಿನಿಗಳಲ್ಲಿ ಕಾರ್ಯಕ್ರಮಗಳ ನಡುವೆ ಅತಿಯಾದ ಜಾಹೀರಾತುಗಳನ್ನು ವೀಕ್ಷಿಸಿ ಬೇಸತ್ತಿದ್ದ ಕೋಟ್ಯಂತರ ಪ್ರೇಕ್ಷಕರಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಟಿವಿ ವಾಹಿನಿಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 12 ನಿಮಿಷಗಳ ಕಾಲ ಮಾತ್ರ ಜಾಹೀರಾತು ಪ್ರಸಾರ ಮಾಡಬೇಕು ಎಂಬ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಟೆಲಿವಿಷನ್ ವಾಹಿನಿಗಳಲ್ಲಿ ಕಾರ್ಯಕ್ರಮಗಳ ನಡುವೆ ಅತಿಯಾದ ಜಾಹೀರಾತುಗಳನ್ನು ವೀಕ್ಷಿಸಿ ಬೇಸತ್ತಿದ್ದ ಕೋಟ್ಯಂತರ ಪ್ರೇಕ್ಷಕರಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಟಿವಿ ವಾಹಿನಿಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 12 ನಿಮಿಷಗಳ ಕಾಲ ಮಾತ್ರ ಜಾಹೀರಾತು ಪ್ರಸಾರ ಮಾಡಬೇಕು ಎಂಬ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿಯಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಪ್ರಸಾರಕರು ಮತ್ತು ಸರ್ಕಾರದ ನಡುವೆ ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ದೀರ್ಘ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ದೂರದರ್ಶನ ಚಾನೆಲ್ಗಳಲ್ಲಿ ವಾಣಿಜ್ಯ ವಿರಾಮಗಳ ಅವಧಿಯನ್ನು ನಿಯಂತ್ರಿಸಲು ಟ್ರಾಯ್ ನಿಯಮವನ್ನು ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಸುದ್ದಿ ವಾಹಿನಿಗಳು, ಪ್ರಾದೇಶಿಕ ಚಾನೆಲ್ಗಳು ಹಾಗೂ ಮನರಂಜನಾ ವಾಹಿನಿಗಳ ಒಕ್ಕೂಟಗಳು ದೆಹಲಿ ಹೈಕೋರ್ಟ್ನಲ್ಲಿ ಒಟ್ಟು 17 ಅರ್ಜಿಗಳನ್ನು ದಾಖಲಿಸಿದ್ದವು. ವಾಹಿನಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಅಮಿತ್ ಮಹಾಜನ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಟಿವಿ ಚಾನೆಲ್ಗಳು ಒಂದು ಗಂಟೆಯ ಪ್ರಸಾರ ಅವಧಿಯಲ್ಲಿ ಒಟ್ಟು 12 ನಿಮಿಷಗಳನ್ನು ಮೀರಿ ಜಾಹೀರಾತು ನೀಡುವಂತಿಲ್ಲ. ಗರಿಷ್ಠ 10 ನಿಮಿಷಗಳ ಕಾಲ ವಾಣಿಜ್ಯ ಜಾಹಿರಾತು ಹಾಗೂ 2 ನಿಮಿಷಗಳ ಅವಧಿಯನ್ನು ವಾಹಿನಿ ತನ್ನ ವೈಯಕ್ತಿಕ ಪ್ರಚಾರಕ್ಕೆ ಮೀಸಲಿಡಬಹುದಾಗಿದೆ.
Also Read: ದೇಶದಲ್ಲಿ ನಕಲಿ ನೋಟುಗಳ ಹೆಚ್ಚಳ! ಆರ್ಬಿಐ ವರದಿಯಲ್ಲಿ ಆತಂಕಕಾರಿ ಮಾಹಿತಿ
ಪ್ರಸಾರ ಸಂಸ್ಥೆಗಳು ಜಾಹೀರಾತು ಮಿತಿಯಿಂದ ತಮಗೆ ಆರ್ಥಿಕ ನಷ್ಟವಾಗುತ್ತದೆ ಮತ್ತು ಇದು ತಮ್ಮ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಕೋರ್ಟ್ನಲ್ಲಿ ವಾದಿಸಿದ್ದವು. ಆದರೆ ಇದಕ್ಕೆ ಸಮ್ಮತಿಸದ ನ್ಯಾಯಪೀಠವು, ಖಾಸಗಿ ಲಾಭಕ್ಕಾಗಿ ಸಾರ್ವಜನಿಕ ಆಸ್ತಿಯಾದ ‘ಸ್ಪೆಕ್ಟ್ರಮ್ ಮತ್ತು ಏರ್ವೇವ್ಸ್’ ಅನ್ನು ಅನಿಯಮಿತವಾಗಿ ಬಳಸಲು ಯಾರಿಗೂ ಹಕ್ಕಿಲ್ಲ.
ಇವು ದೇಶದ ಜನರಿಗೆ ಸೇರಿದ ಸಂಪನ್ಮೂಲಗಳಾಗಿದ್ದು, ಇವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸ್ಪಷ್ಟಪಡಿಸಿದೆ. ಅತಿಯಾದ ವಾಣಿಜ್ಯೀಕರಣದಿಂದ ಪ್ರೇಕ್ಷಕರ ವೀಕ್ಷಣೆಯ ಗುಣಮಟ್ಟ ಹಾಳಾಗುತ್ತಿರುವುದನ್ನು ತಡೆಯಲು ಈ ಕ್ರಮ ಅನಿವಾರ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Break in advertising boom of channels Big relief for viewers



