ಡಿಕೆ ಸಂಪುಟ – ಕರಾವಳಿಗೆ ಡಬ್ಬಲ್ ಧಮಾಕ :ಯುಟಿ ಖಾದರ್, ಡಾ. ಮಂಜುನಾಥ ಭಂಡಾರಿಗೆ ಮಂತ್ರಿಗಿರಿ ಫಿಕ್ಸ್
ಆದ್ರೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಲೇ, ಕರಾವಳಿಗೆ ಬಂಪರ್ ಕೊಡುಗೆ ಸಿಗುವುದು ಖಚಿತ ಎನ್ನಲಾಗುತ್ತಿದೆ.
ಮಂಗಳೂರು : ಡಿಕೆ ಶಿವಕುಮಾರ್ ಅವರ ಸಂಪುಟ ಸೇರುವ ಕಾಂಗ್ರೆಸ್ ನಾಯಕರ ಕುರಿತು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಕರಾವಳಿಯ ಯಾರೊಬ್ಬರಿಗೂ ಕೂಡ ಮಂತ್ರಿಗಿರಿ ಸಿಕ್ಕಿರಲಿಲ್ಲ. ಆದ್ರೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಲೇ, ಕರಾವಳಿಗೆ ಬಂಪರ್ ಕೊಡುಗೆ ಸಿಗುವುದು ಖಚಿತ ಎನ್ನಲಾಗುತ್ತಿದ್ದು, ಕರಾವಳಿಯ ಹಿರಿಯ ಕಾಂಗ್ರೆಸಿಗರಾದ ಯುಟಿ ಖಾದರ್ ಹಾಗೂ ಮಂಜುನಾಥ್ ಭಂಡಾರಿ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ.
ಯುಟಿ ಖಾದರ್‌ಗೆ ಮಂತ್ರಿಗಿರಿ ಖಚಿತ
ಸತತ 5 ಬಾರಿ ಉಳ್ಳಾಲದ ಶಾಸಕರಾಗಿರುವ ಯುಟಿ ಖಾದರ್ ಈಗಾಗಲೇ 3 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದ್ರಲ್ಲೂ ಆರೋಗ್ಯ ಸಚಿವರಾಗಿ ಯುಟಿ ಖಾದರ್ ಅವರು ಉತ್ತಮ ಹೆಸರು ಸಂಪಾದಿಸಿದ್ದರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ಅವರು ವಿಧಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಯುಟಿ ಖಾದರ್ ಅವರು ಈ ಬಾರಿ ಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡುವುದು ಖಚಿತ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮುಂದಿನ ಚುನಾವಣೆಯ ದೃಷ್ಟಿಯಿಂದ ಈ ಬಾರಿ ಕರಾವಳಿಗೆ ಪ್ರಾತಿನಿದ್ಯ ನೀಡಲೇ ಬೇಕಾದ ಸಂದಿಗ್ದತೆಗೆ ಕಾಂಗ್ರೆಸ್ ಸಿಲುಕಿದೆ. ಮಾತ್ರವಲ್ಲ ಸಚಿವ ಸ್ಥಾನ ನೀಡದ ಹೊರತು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಹೆಚ್ಚುವರಿ ಸ್ಥಾನ ಗೆಲುವುದು ಅಸಾಧ್ಯ. ಇದೇ ಕಾರಣದಿಂದಲೇ ಯುಟಿ ಖಾದರ್ ಸ್ಪೀಕರ್ ಹುದ್ದೆಯಿಂದ ಕೆಳಗೆ ಇಳಿದು ಮಿನಿಸ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಗೆ ಸಚಿವ ಸ್ಥಾನ
ಕರ್ನಾಟಕದ ಕರಾವಳಿ ಭಾಗದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ಡಿಕೆ ಶಿವಕುಮಾರ್ ಈ ಬಾರಿ ಕರಾವಳಿಗೆ ಹೆಚ್ಚುವರಿ ಸಚಿವ ಸ್ಥಾನ ನೀಡುವುದು ಖಚಿತ. ಅದ್ರಲ್ಲೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿ, ಶಿಕ್ಷಣ ತಜ್ಞರಾಗಿರುವ ಡಾ. ಮಂಜುನಾಥ್ ಭಂಡಾರಿ ಅವರಿಗೆ ಸಚಿವ ಸ್ಥಾನ ಒಲಿಯುವುದು ಖಚಿತ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಮಂಜುನಾಥ್ ಭಂಡಾರಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಕರಾವಳಿ ಭಾಗದ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿಬರುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ವಿರುದ್ದ ಕಣಕ್ಕೆ ಇಳಿದಿದ್ದರು. ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರೂ ಕೂಡ ರಾಜ್ಯ ರಾಜಕಾರಣದಲ್ಲಿ ಭಂಡಾರಿ ಅವರ ಹೆಸರು ಮುಂಚೂಣಿಗೆ ಬಂದಿತ್ತು.
ಮಂಜುನಾಥ್ ಭಂಡಾರಿ 2021 ರ ಡಿಸೆಂಬರ್‌ನಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ದಾಖಲಿಸಿದರು. ಬಿಜೆಪಿಯ ಕೋಟೆಯಾಗಿದ್ದ ಕರಾವಳಿಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ (ಗ್ರಾಮ ಪಂಚಾಯತ್ ಸದಸ್ಯರ) ಬೆಂಬಲ ಕ್ರೋಢೀಕರಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಪ್ರಮುಖವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿರುವ ಡಿಕೆ ಶಿವಕುಮಾರ್ ಅವರಿಗೆ ಮಂಜುನಾಥ್ ಭಂಡಾರಿ ಅವರು ಅತ್ಯಾಪ್ತರಾಗಿದ್ದರು. ಕರಾವಳಿ ಭಾಗದ ಕಾಂಗ್ರೆಸ್ ತಂತ್ರಗಾರಿಕೆ ಹಾಗೂ ಪಕ್ಷದ ಆಂತರಿಕ ಲೆಕ್ಕಾಚಾರಗಳಲ್ಲಿ ಡಿಕೆಶಿಗೆ ಇವರು ಪ್ರಮುಖ ಸಲಹೆಗಾರರಾಗಿದ್ದಾರೆ. ಜೊತೆಗೆ ಕರಾವಳಿ ಭಾಗದ ಬಂಟ ಸಮುದಾಯದ ಪ್ರಮುಖ ನಾಯಕರು.
ಸಿಎಂ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಯಾರೊಬ್ಬರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೊರ ಜಿಲ್ಲೆಯವರನ್ನೇ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ ಡಿಕೆ ಸಂಪುಟದಲ್ಲಿ ಯುಟಿ ಖಾದರ್ ಹಾಗೂ ಮಂಜುನಾಥ್ ಭಂಡಾರಿ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ, ಮಂಗಳೂರಿಗೆ ಯುಟಿ ಖಾದರ್ ಹಾಗೂ ಉಡುಪಿ ಮಂಜುನಾಥ್ ಭಂಡಾರಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸ ಬೇಕೆಂಬ ಕೂಗು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.



