ಗೋಲ್ಡ್ ಲೋನ್‌ಗೆ ಸಿಬಿಲ್ ಸ್ಕೋರ್ ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಬಂಗಾರ ಅಡ ಇಟ್ಟು ಸಾಲ ಪಡೆಯಲು ಸಿಬಿಲ್ ಸ್ಕೋರ್ ಅಗತ್ಯವೇ ಎಂಬ ಪ್ರಶ್ನೆ ಹಲವರಲ್ಲಿದೆ. ಗೋಲ್ಡ್ ಲೋನ್ ಪಡೆಯುವ ನಿಯಮಗಳು ಹಾಗೂ ಬ್ಯಾಂಕ್ ಪ್ರಕ್ರಿಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ತುರ್ತು ಹಣಕಾಸು ಅಗತ್ಯ ಎದುರಾದಾಗ ಹಲವರು ಬಂಗಾರದ ಆಭರಣಗಳನ್ನು ಅಡ ಇಟ್ಟು ಗೋಲ್ಡ್ ಲೋನ್ ಪಡೆಯುತ್ತಾರೆ. ಕಡಿಮೆ ಸಮಯದಲ್ಲಿ ಸಾಲ ಸಿಗುವ ಕಾರಣ ಈ ಆಯ್ಕೆಯನ್ನು ಹೆಚ್ಚು ಮಂದಿ ಬಳಸುತ್ತಿದ್ದಾರೆ. ಆದರೆ ಗೋಲ್ಡ್ ಲೋನ್ ಪಡೆಯಲು ಸಿಬಿಲ್ ಸ್ಕೋರ್ ಕಡ್ಡಾಯವೇ ಎಂಬ ಪ್ರಶ್ನೆ ಇತ್ತೀಚೆಗೆ ಹಲವರಲ್ಲಿ ಮೂಡಿದೆ.
ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಗೋಲ್ಡ್ ಲೋನ್ ಒಂದು ಸುರಕ್ಷಿತ (Secured) ಸಾಲವಾಗಿರುವುದರಿಂದ ಸಾಮಾನ್ಯ ವೈಯಕ್ತಿಕ ಸಾಲಗಳಂತೆ ಸಿಬಿಲ್ ಸ್ಕೋರ್ ಕಡ್ಡಾಯವಾಗಿರುವುದಿಲ್ಲ. ಗ್ರಾಹಕರು ತಾಕತ್ತು ಇಡುವ ಬಂಗಾರದ ಶುದ್ಧತೆ ಮತ್ತು ಮೌಲ್ಯದ ಆಧಾರದ ಮೇಲೆ ಬ್ಯಾಂಕುಗಳು ಸಾಲ ಮಂಜೂರು ಮಾಡುತ್ತವೆ.
ಸಾಮಾನ್ಯವಾಗಿ 18 ರಿಂದ 22 ಕ್ಯಾರೆಟ್ ಬಂಗಾರವನ್ನು ಬ್ಯಾಂಕುಗಳು ಸ್ವೀಕರಿಸುತ್ತವೆ. ಅಡ ಇಡಲಾದ ಬಂಗಾರದ ಮೌಲ್ಯದ ಸುಮಾರು 75ರಿಂದ 85 ಶೇಕಡಾವರೆಗೆ ಸಾಲ ಪಡೆಯುವ ಅವಕಾಶ ಇರುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ಹಣ ಪಡೆಯಬಹುದು.
ಗೋಲ್ಡ್ ಲೋನ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಇರಬೇಕು. ಉದ್ಯೋಗಿಗಳು, ವ್ಯಾಪಾರಿಗಳು, ಗೃಹಿಣಿಯರು ಸೇರಿದಂತೆ ಅರ್ಹ ವ್ಯಕ್ತಿಗಳು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿಯ ವೇಳೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋಗಳಂತಹ ದಾಖಲೆಗಳು ಅಗತ್ಯವಾಗುತ್ತವೆ.
ಆದಾಯದ ದಾಖಲೆಗಳಿಲ್ಲದೆಯೇ ಕೆಲವು ಬ್ಯಾಂಕುಗಳು ₹2 ಲಕ್ಷದವರೆಗೆ ಸಾಲ ಮಂಜೂರು ಮಾಡುತ್ತವೆ. ಆದರೆ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯಲು ಆದಾಯದ ದಾಖಲೆಗಳನ್ನು ಸಲ್ಲಿಸುವಂತೆ ಬ್ಯಾಂಕುಗಳು ಕೇಳಬಹುದು.
ತಜ್ಞರ ಪ್ರಕಾರ, ಸಿಬಿಲ್ ಸ್ಕೋರ್ ಕಡ್ಡಾಯವಲ್ಲದಿದ್ದರೂ ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಕೆಲವು ಬ್ಯಾಂಕುಗಳು ಕಡಿಮೆ ಬಡ್ಡಿದರ ಅಥವಾ ಪ್ರೊಸೆಸಿಂಗ್ ಶುಲ್ಕದಲ್ಲಿ ರಿಯಾಯಿತಿ ನೀಡುವ ಸಾಧ್ಯತೆಯಿದೆ. ಆದ್ದರಿಂದ ಸಿಬಿಲ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳುವುದು ಹೆಚ್ಚುವರಿ ಲಾಭಕ್ಕೆ ಕಾರಣವಾಗಬಹುದು.
ಗೋಲ್ಡ್ ಲೋನ್ ಪಡೆಯಲು ಬಯಸುವವರು ತಮ್ಮ ಬಂಗಾರದ ಆಭರಣಗಳೊಂದಿಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಬ್ಯಾಂಕ್ ಅಧಿಕಾರಿಗಳು ಬಂಗಾರದ ಗುಣಮಟ್ಟ ಮತ್ತು ಮೌಲ್ಯ ಪರಿಶೀಲಿಸಿ ಸಾಲದ ಮೊತ್ತವನ್ನು ನಿರ್ಧರಿಸುತ್ತಾರೆ.



