ಗೃಹಲಕ್ಷ್ಮಿಯರೇ ಗಮನಿಸಿ: ₹2,000 ಹಣ ಮುಂದುವರಿಯಬೇಕಾದರೆ ತಕ್ಷಣ ಈ ಕೆಲಸ ಮಾಡಿ!
ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2,000 ಪಡೆಯುತ್ತಿರುವ ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಒನ್-ಟೈಮ್ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಲಾಗುತ್ತದೆ.

ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ದುರುಪಯೋಗವನ್ನು ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಗಿದೆ. ಯೋಜನೆಯಡಿ ಮಾಸಿಕ ₹2,000 ಪಡೆಯುತ್ತಿರುವ ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಿ ವ್ಯವಸ್ಥೆಯಿಂದ ಹೊರದಬ್ಬಲು ಒನ್-ಟೈಮ್ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಪ್ರಸ್ತುತ ಅರ್ಜಿ ನವೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಸರ್ಕಾರ ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ರಾಜ್ಯದಲ್ಲಿ ಮೃತಪಟ್ಟ ಲಕ್ಷಾಂತರ ಮಹಿಳೆಯರ ಖಾತೆಗಳಿಗೂ ಇನ್ನೂ ಹಣ ಜಮೆ ಆಗುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ ಸಾವಿರಾರು ಆದಾಯ ತೆರಿಗೆ ಪಾವತಿದಾರರು ಹಾಗೂ ಶ್ರೀಮಂತ ಕುಟುಂಬಗಳು ನಿಯಮಬಾಹಿರವಾಗಿ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಇದನ್ನು ಸಂಪೂರ್ಣವಾಗಿ ತಡೆದು ಕೇವಲ ಅರ್ಹ ಬಡ ಮಹಿಳೆಯರಿಗೆ ಮಾತ್ರ ಹಣ ತಲುಪುವಂತೆ ಮಾಡಲು ಈ ನವೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ.
ಇದನ್ನೂ ಓದಿ : ಪಡಿತರ ಪಡೆಯಲು ಹೊಸ ಸೌಲಭ್ಯ! ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು
ಹೊಸ ನಿಯಮದ ಪ್ರಕಾರ, ಫಲಾನುಭವಿಗಳ ಹೆಬ್ಬೆಟ್ಟು ದೃಢೀಕರಣ ಪಡೆಯಲಾಗುವುದು. ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ಕಾರಣಗಳಿಂದ ಹೆಬ್ಬೆಟ್ಟು ಗುರುತು ಸಿಗದಿದ್ದಲ್ಲಿ, ಕಣ್ಣಿನ ರೆಟಿನಾ ಅಥವಾ ಮುಖದ ಗುರುತು ಆಧರಿಸಿ ದೃಢೀಕರಣ ಪೂರ್ಣಗೊಳಿಸಲು ಇಲಾಖೆ ಚರ್ಚಿಸಿದೆ. ಹಳೆಯ ಅರ್ಜಿಯ ಆಧಾರದ ಮೇಲೆಯೇ ಈ ಪರಿಶೀಲನೆ ನಡೆಯಲಿದ್ದು, ಬದಲಾಗಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಲು ಅವಕಾಶ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿನ ಆರ್.ಡಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಗೃಹಲಕ್ಷ್ಮಿ ಹಣ ನಿರಂತರವಾಗಿ ಬರಲು ಮಹಿಳೆಯರು ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ನೀಡಿ ನವೀಕರಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳಿಸದ ಖಾತೆಗಳಿಗೆ ಭವಿಷ್ಯದಲ್ಲಿ ತಿಂಗಳ ಹಣ ಜಮೆಯಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.



