ರಾಜ್ಯದಲ್ಲಿ ವರುಣನ ಅಬ್ಬರ.. ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಮುನ್ಸೂಚನೆ
ವಾತಾವರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಗಳಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ

ರಾಜ್ಯದಲ್ಲಿ ಮುಂಗಾರು ಮಾರುತಗಳು ತೀವ್ರಗೊಂಡಿದ್ದು, ರಾಜ್ಯದಾದ್ಯಂತ ಮಳೆ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ವಾತಾವರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಗಳಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ವಾಸಿಸುವ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕರಾವಳಿ ತೀರದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 12 ಮತ್ತು 13 ರಂದು ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಸಮುದ್ರ ತೀರದಲ್ಲಿ ಪ್ರಬಲ ಗಾಳಿ ಬೀಸಲಿದ್ದು, ಮೀನುಗಾರರು ಮತ್ತು ಪ್ರವಾಸಿಗರು ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ. ಇದರೊಂದಿಗೆ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಿಗೂ ಮಳೆಯ ಅಲರ್ಟ್ ಘೋಷಿಸಲಾಗಿದ್ದು, ಈ ಭಾಗಗಳಲ್ಲಿ ಗುಡುಗು ಮತ್ತು ಮಿಂಚಿನ ಆರ್ಭಟ ಹೆಚ್ಚಿರಲಿದೆ.
ಇದನ್ನೂ ಓದಿ : ಜೂನ್ 16 ರವರೆಗೆ ಮಳೆಯ ಆರ್ಭಟ : ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಹೈ ಅಲರ್ಟ್
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಸಿಲಿಕಾನ್ ಸಿಟಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ತಂಪಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವುದರಿಂದ ತಾಪಮಾನವು ಆಹ್ಲಾದಕರವಾಗಿರಲಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.



