ಸರ್ಕಾರಿ ನೌಕರರೇ ಗಮನಿಸಿ: ಇನ್ಮುಂದೆ ಬೆಳಗ್ಗೆ 10ಕ್ಕೆ ಹಾಜರಾತಿ ಕಡ್ಡಾಯ, ‘KAMS’ ಆ್ಯಪ್‌ನಲ್ಲೇ ಅಟೆಂಡೆನ್ಸ್ ಕಡ್ಡಾಯ
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಿಬ್ಬಂದಿಗಳು ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಮಹತ್ವದ ಹೆಜ್ಜೆ

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ನೌಕರರು ತಡವಾಗಿ ಬರುವುದಕ್ಕೆ ಬ್ರೇಕ್ ಬೀಳಲಿದೆ. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಿಬ್ಬಂದಿಗಳು ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇನ್ಮುಂದೆ ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ತಮ್ಮ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಇದಕ್ಕಾಗಿ ಸರ್ಕಾರವು ತಂತ್ರಜ್ಞಾನ ಆಧಾರಿತ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ನೌಕರರು ತಮ್ಮ ಮೊಬೈಲ್‌ನಲ್ಲಿ ‘ಕರ್ತವ್ಯ’ (KAMS) ಆಪ್ ಮೂಲಕವೇ ಇನ್ಮುಂದೆ ಅಟೆಂಡೆನ್ಸ್ ಹಾಕಬೇಕಾಗುತ್ತದೆ. ಕೇವಲ ಹಾಜರಾತಿ ಅಷ್ಟೇ ಅಲ್ಲದೆ, ನೌಕರರು ಕಚೇರಿಯಲ್ಲೇ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ನಿರ್ದೇಶಾಂಕಗಳನ್ನು ಸಂಗ್ರಹಿಸುವ ಜಿಯೋ ಟ್ಯಾಗಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ.
ಹೊಸ ನಿಯಮದ ಪ್ರಕಾರ, ಪ್ರತಿ ಕಚೇರಿಯಿಂದ ಗ್ರೂಪ್ ‘ಬಿ’ ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯೊಬ್ಬರನ್ನು ಕಚೇರಿಯ ನಿಖರ ರೇಖಾಂಶ ಮತ್ತು ಅಕ್ಷಾಂಶಗಳನ್ನು ದಾಖಲಿಸಲು ನಾಮನಿರ್ದೇಶನ ಮಾಡಬೇಕು. ಈ ನಾಮನಿರ್ದೇಶಿತ ಅಧಿಕಾರಿಯು ಕಚೇರಿಯ ಆವರಣದಲ್ಲೇ ಭೌತಿಕವಾಗಿ ಹಾಜರಿದ್ದು, ಲೊಕೇಶನ್ ಆನ್ ಮಾಡಿ HRMS2-ESS ಆಪ್ ಮೂಲಕ ಕಚೇರಿ ಲೊಕೇಶನ್ ಅನ್ನು ಸಬ್ಮಿಟ್ ಮಾಡಬೇಕಾಗುತ್ತದೆ.
ಒಂದೊಮ್ಮೆ ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಾಗ ಅಥವಾ ಹಾಜರಾತಿ ದಾಖಲಿಸುವಾಗ ತಾಂತ್ರಿಕ ತೊಂದರೆಗಳು ಎದುರಾದರೆ, ಸಿಬ್ಬಂದಿಗಳ ನೆರವಿಗಾಗಿ ಸಿಇಜಿ ಸಹಾಯವಾಣಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಈ ಕಟ್ಟುನಿಟ್ಟಿನ ನಿಯಮದಿಂದಾಗಿ ಕಚೇರಿಗಳಲ್ಲಿ ಸಿಬ್ಬಂದಿಗಳ ಗೈರುಹಾಜರಾತಿ ತಪ್ಪಲಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೇವೆಗಳು ಯಾವುದೇ ವಿಳಂಬವಿಲ್ಲದೆ ಮತ್ತಷ್ಟು ವೇಗವಾಗಿ ಸಿಗುವ ನಿರೀಕ್ಷೆಯಿದೆ.



