ರಾಜ್ಯದ 26 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಹೈ ಅಲರ್ಟ್.. ಇಂದಿನಿಂದ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆ!
ಇಂದಿನಿಂದ ಜೂನ್ 20ರವರೆಗೆ ಕರ್ನಾಟಕದ 26ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯಾದ್ಯಂತ ಮುಂಗಾರು ಮಾರುತಗಳ ಚಲನೆಯಲ್ಲಿ ಭಾರಿ ಏರುಪೇರು ಉಂಟಾಗಿದ್ದು, ಇಂದಿನಿಂದ ಜೂನ್ 20ರವರೆಗೆ ಕರ್ನಾಟಕದ 26ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ತೀರದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿರುವುದರಿಂದ ಈ ದಿಢೀರ್ ಬದಲಾವಣೆ ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಒಳನಾಡಿನ ಭಾಗಗಳಲ್ಲಿ ಹವಾಮಾನ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ಹವಾಮಾನ ತಜ್ಞರ ವರದಿಯ ಪ್ರಕಾರ, ಕರಾವಳಿ ಭಾಗದಲ್ಲಿ ಇಂದಿನಿಂದ ಮಳೆಯ ಆರ್ಭಟ ಕೊಂಚ ತಗ್ಗಲಿದ್ದು, ದಿನದಲ್ಲಿ ಕೆಲವು ಬಾರಿ ಬಂದು ಹೋಗುವ ಸಾಧಾರಣ ಮಳೆಗೆ ಸೀಮಿತವಾಗಲಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಜೂನ್ 17ರವರೆಗೆ ಸಾಧಾರಣ ಮಳೆ ಮುಂದುವರಿಯಲಿದೆ. ಮತ್ತೊಂದೆಡೆ, ಉತ್ತರ ಒಳನಾಡಿನ ಹಾವೇರಿ, ಗದಗ್, ಬೆಳಗಾವಿ ಹಾಗೂ ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಿ, ನಂತರ ವಾತಾವರಣವು ಮೋಡಕವಿದ ಸ್ಥಿತಿಗೆ ತಲುಪಲಿದೆ.
ಇದನ್ನೂ ಓದಿ : ರಾಜ್ಯದ ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ನ್ಯೂಸ್.. ಆಸ್ತಿ ತೆರಿಗೆ ಪಾವತಿಯಲ್ಲಿ ಭಾರೀ ರಿಯಾಯಿತಿ!
ಆದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಳವಳಕಾರಿ ಮುನ್ಸೂಚನೆ ನೀಡಿದ್ದು, ಇಲ್ಲಿ ಮುಂದಿನ 10 ದಿನಗಳ ಕಾಲ ನಿರಂತರ ಮಳೆ ಸುರಿಯುವ ಸಾಧ್ಯತೆಯಿದೆ. ಮೈಸೂರು, ಕೋಲಾರ, ತುಮಕೂರು, ಮಂಡ್ಯ ಹಾಗೂ ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್ 16ರವರೆಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಭಾರಿ ಸುಂಟರಗಾಳಿ ಬೀಸುವ ಸಾಧ್ಯತೆ ಶೇ. 75ರಷ್ಟಿದೆ. ಸಿಡಿಲು ಮತ್ತು ಮಿಂಚಿನ ಆರ್ಭಟ ಹೆಚ್ಚಿರುವುದರಿಂದ ಪ್ರಮುಖವಾಗಿ ಕೃಷಿಕರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಮರ ಹಾಗೂ ವಿದ್ಯುತ್ ಕಂಬಗಳ ಕೆಳಗೆ ನಿಲ್ಲಬಾರದು ಎಂದು ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.



