ರಾಜ್ಯದ ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ನ್ಯೂಸ್.. ಆಸ್ತಿ ತೆರಿಗೆ ಪಾವತಿಯಲ್ಲಿ ಭಾರೀ ರಿಯಾಯಿತಿ!
ರಾಜ್ಯದಾದ್ಯಂತ ಇರುವ ಆಸ್ತಿ ಮಾಲೀಕರಿಗೆ ಹಾಗೂ ನಿಯಮಿತವಾಗಿ ತೆರಿಗೆ ಪಾವತಿಸುವ ನಾಗರಿಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ರಿಯಾಯಿತಿಯ ಕೊಡುಗೆಯೊಂದನ್ನು ಪ್ರಕಟಿಸಿದೆ.

ರಾಜ್ಯದಾದ್ಯಂತ ಇರುವ ಆಸ್ತಿ ಮಾಲೀಕರಿಗೆ ಹಾಗೂ ನಿಯಮಿತವಾಗಿ ತೆರಿಗೆ ಪಾವತಿಸುವ ನಾಗರಿಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ರಿಯಾಯಿತಿಯ ಕೊಡುಗೆಯೊಂದನ್ನು ಪ್ರಕಟಿಸಿದೆ. ಪ್ರಸಕ್ತ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡುವ ಸಾರ್ವಜನಿಕರಿಗೆ ಒಟ್ಟು ಮೊತ್ತದಲ್ಲಿ ಶೇಕಡಾ 5ರಷ್ಟು ವಿನಾಯಿತಿ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಸಾರ್ವಜನಿಕರು ಕೊನೆಯ ದಿನದ ಧಾವಂತದಿಂದ ಪಾರಾಗಲು ಮತ್ತು ಸರ್ಕಾರದ ಈ ಆರ್ಥಿಕ ಲಾಭವನ್ನು ಪಡೆದುಕೊಳ್ಳಲು ತಕ್ಷಣವೇ ತೆರಿಗೆ ಪಾವತಿಸುವಂತೆ ಕೋರಲಾಗಿದೆ.
ಆದರೆ, ಈ ವಿಶೇಷ ರಿಯಾಯಿತಿಯನ್ನು ಪಡೆದುಕೊಳ್ಳಲು ಸರ್ಕಾರವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ. ತೆರಿಗೆದಾರರು ಜೂನ್ 30ರ ಒಳಗಾಗಿ ತಮ್ಮ ವಾರ್ಷಿಕ ಆಸ್ತಿ ತೆರಿಗೆಯ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಯಾರಾದರೂ ತೆರಿಗೆಯನ್ನು ಭಾಗಶಃ ಅಥವಾ ಕಂತುಗಳ ರೂಪದಲ್ಲಿ ಪಾವತಿ ಮಾಡಿದರೆ, ಅಂತಹ ಸಾರ್ವಜನಿಕರಿಗೆ ಈ ಶೇ. 5ರಷ್ಟು ಡಿಸ್ಕೌಂಟ್ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ : ಅಪ್ರಾಪ್ತರಿಗಿಲ್ಲ ‘ಎಣ್ಣೆ’ ಭಾಗ್ಯ: 21 ವರ್ಷದೊಳಗಿನವರಿಗೆ ಮದ್ಯ ನೀಡಿದ್ರೆ ಬಾರ್ ಲೈಸೆನ್ಸ್ ರದ್ದು!
2026ರ ಜೂನ್ 30ರ ನಂತರ ಸಲ್ಲಿಕೆಯಾಗುವ ಯಾವುದೇ ಆಸ್ತಿ ತೆರಿಗೆ ಪಾವತಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಜುಲೈ 1ರಿಂದ ಪೂರ್ಣ ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ಇನ್ನು ತೆರಿಗೆ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಎದುರಾಗುವ ತಾಂತ್ರಿಕ ತೊಂದರೆಗಳು, ಆನ್‌ಲೈನ್ ಪಾವತಿಯ ಗೊಂದಲಗಳು ಅಥವಾ ತೆರಿಗೆ ಲೆಕ್ಕಾಚಾರದ ಕುರಿತು ಮಾಹಿತಿ ಪಡೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಾಗರಿಕರು ಸರ್ಕಾರದ ಅಧಿಕೃತ ‘ಪಂಚಮಿತ್ರ’ ಸಹಾಯವಾಣಿ ಸಂಖ್ಯೆ: 8277506000 ಗೆ ಕರೆ ಮಾಡಿ ತಜ್ಞರಿಂದ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಆನ್‌ಲೈನ್ ಅಥವಾ ನಿಗದಿತ ಕೇಂದ್ರಗಳ ಮೂಲಕ ಶೀಘ್ರವಾಗಿ ತೆರಿಗೆ ಪಾವತಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಲಾಗಿದೆ.



