ತಂದೆ ವಿಲ್ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿ ಸಿಗುತ್ತದೆಯೇ?
ತಂದೆ ವಿಲ್ ಬರೆಯದೇ ಮೃತಪಟ್ಟರೆ ವಿವಾಹಿತ ಮಗಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇರುತ್ತದೆ. ಹಿಂದೂ ವಾರಸತ್ವ ಕಾಯ್ದೆ ಪ್ರಕಾರ ಪುತ್ರರಷ್ಟೇ ಪಾಲು ಪಡೆಯುವ ಅವಕಾಶ ಕಾನೂನಿನಲ್ಲಿ ನೀಡಲಾಗಿದೆ.

ಆಸ್ತಿ ಹಂಚಿಕೆ ವಿಷಯದಲ್ಲಿ ಕುಟುಂಬಗಳಲ್ಲಿ ಆಗಾಗ್ಗೆ ಗೊಂದಲಗಳು ಮತ್ತು ವಿವಾದಗಳು ಎದುರಾಗುತ್ತವೆ. ವಿಶೇಷವಾಗಿ ವಿವಾಹವಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯೇ ಎಂಬ ಪ್ರಶ್ನೆ ಅನೇಕ ಕುಟುಂಬಗಳಲ್ಲಿ ಕೇಳಿಬರುತ್ತದೆ. ಕಾನೂನು ಪ್ರಕಾರ ಈ ವಿಷಯದಲ್ಲಿ ಸ್ಪಷ್ಟ ನಿಯಮಗಳಿದ್ದು, ಹಲವು ಜನರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ.
ತಂದೆ ತನ್ನ ಆಸ್ತಿಯನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ಯಾವುದೇ ವಿಲ್ (Will) ಬರೆದೇ ನಿಧನರಾದರೆ, ಆ ಆಸ್ತಿಯನ್ನು ‘ಇಂಟೆಸ್ಟೇಟ್’ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆಸ್ತಿಯ ಹಂಚಿಕೆ ಹಿಂದೂ ವಾರಸತ್ವ ಕಾಯ್ದೆಯ ನಿಯಮಗಳ ಪ್ರಕಾರ ನಡೆಯುತ್ತದೆ.
ಕಾನೂನಿನ ಪ್ರಕಾರ ಮೃತ ವ್ಯಕ್ತಿಯ ಪತ್ನಿ, ಪುತ್ರರು ಮತ್ತು ಪುತ್ರಿಯರು ಮೊದಲ ದರ್ಜೆಯ ವಾರಸುದಾರರು (Class-1 Heirs) ಆಗಿರುತ್ತಾರೆ. ಹೀಗಾಗಿ ತಂದೆ ವಿಲ್ ಬರೆಯದೆ ಮೃತಪಟ್ಟಿದ್ದರೆ, ಪುತ್ರ ಮತ್ತು ಪುತ್ರಿಯ ನಡುವೆ ಯಾವುದೇ ಭೇದಭಾವವಿಲ್ಲದೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಬೇಕು.
ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಪತ್ನಿ, ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದರೆ, ಆಸ್ತಿಯನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಿ ಮೂವರಿಗೂ ಹಂಚಬೇಕು. ಮಗಳು ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಹಕ್ಕು ಕಡಿಮೆಯಾಗುವುದಿಲ್ಲ. ಮಗನಿಗೆ ಸಿಗುವಷ್ಟೇ ಪಾಲು ಮಗಳಿಗೂ ದೊರೆಯುತ್ತದೆ.
2005ರಲ್ಲಿ ಹಿಂದೂ ವಾರಸತ್ವ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ನಂತರ ಪುತ್ರಿಯರಿಗೆ ಪುತ್ರರ ಸಮಾನ ಹಕ್ಕು ನೀಡಲಾಯಿತು. ನಂತರ 2020ರಲ್ಲಿ ಸುಪ್ರೀಂ ಕೋರ್ಟ್ ಕೂಡ ಮಹತ್ವದ ತೀರ್ಪು ನೀಡಿ, ಪುತ್ರಿಯರಿಗೆ ಜನ್ಮಸಿದ್ಧ ಹಕ್ಕು ಇದೆ ಎಂದು ಸ್ಪಷ್ಟಪಡಿಸಿತು. ತಂದೆ ಜೀವಂತವಾಗಿದ್ದರೋ ಇಲ್ಲವೋ ಎಂಬುದು ಈ ಹಕ್ಕಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕುಟುಂಬ ಸದಸ್ಯರು ಆಸ್ತಿ ಹಂಚಿಕೆಗೆ ಒಪ್ಪದಿದ್ದರೆ, ವಿವಾಹಿತ ಮಗಳು ಕಾನೂನುಬದ್ಧವಾಗಿ ತನ್ನ ಪಾಲನ್ನು ಕೇಳಬಹುದು. ಮೊದಲಿಗೆ ತಂದೆಯ ಮರಣ ಪ್ರಮಾಣಪತ್ರ ಹಾಗೂ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ (Legal Heir Certificate) ಪಡೆಯುವುದು ಅಗತ್ಯ. ಈ ದಾಖಲೆಯಲ್ಲಿ ಮಗಳ ಹೆಸರೂ ವಾರಸುದಾರರ ಪಟ್ಟಿಯಲ್ಲಿ ಸೇರಿರುತ್ತದೆ.
ಒಂದು ವೇಳೆ ಸಹೋದರರು ಅಥವಾ ಇತರ ಕುಟುಂಬ ಸದಸ್ಯರು ಪಾಲು ನೀಡಲು ನಿರಾಕರಿಸಿದರೆ, ಮಗಳು ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ವಿಭಜನಾ ದಾವೆ (Partition Suit) ಹೂಡಬಹುದು. ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಆಕೆಗೆ ಕಾನೂನುಬದ್ಧವಾಗಿ ಸಿಗಬೇಕಾದ ಪಾಲು ನೀಡುವಂತೆ ಆದೇಶಿಸಬಹುದು.
ಆದರೆ ಇಲ್ಲಿ ಒಂದು ಪ್ರಮುಖ ವಿನಾಯಿತಿ ಇದೆ. ತಂದೆ ಸ್ವತಃ ಸಂಪಾದಿಸಿದ ಆಸ್ತಿಗೆ ಸಂಬಂಧಿಸಿದಂತೆ ಜೀವಿತಾವಧಿಯಲ್ಲೇ ಮಾನ್ಯ ವಿಲ್ ಬರೆದು, ಅದನ್ನು ನೋಂದಾಯಿಸಿದ್ದರೆ, ಆ ಆಸ್ತಿಯ ಹಂಚಿಕೆ ವಿಲ್ ಪ್ರಕಾರವೇ ನಡೆಯುತ್ತದೆ. ಅಂತಹ ಸಂದರ್ಭಗಳಲ್ಲಿ ಮಗಳು ಆ ವಿಲ್ ಅನ್ನು ಪ್ರಶ್ನಿಸುವ ಹಕ್ಕು ಸೀಮಿತವಾಗಿರಬಹುದು.
ಇನ್ನೊಂದೆಡೆ, ಪೂರ್ವಿಕರಿಂದ ಬಂದಿರುವ ಪಾರಂಪರಿಕ ಆಸ್ತಿಯ ವಿಷಯದಲ್ಲಿ ಪುತ್ರಿಯರಿಗೆ ಜನ್ಮಸಿದ್ಧ ಹಕ್ಕು ಇರುತ್ತದೆ. ಆದ್ದರಿಂದ ಇಂತಹ ಆಸ್ತಿಯಲ್ಲಿ ಮಗಳ ಪಾಲು ಕಾನೂನಿನ ಮೂಲಕ ರಕ್ಷಿಸಲ್ಪಟ್ಟಿದೆ.



