ಗ್ಯಾಸ್ ಸಿಲಿಂಡರ್ ಮೇಲಿರುವ ವಿಶೇಷ ಕೋಡ್‌ಗಳ ಅರ್ಥ ತಿಳಿಯದೇ ಬಳಸಿದರೆ ಅಪಾಯ
ಎಲ್‌ಪಿಜಿ ಸಿಲಿಂಡರ್ ಮೇಲಿರುವ ವಿಶೇಷ ಕೋಡ್‌ಗಳ ಅರ್ಥ ತಿಳಿಯದೇ ಬಳಸಿದರೆ ಅಪಾಯ ಎದುರಾಗಬಹುದು. ಸಿಲಿಂಡರ್ ಸುರಕ್ಷತೆ ಖಚಿತಪಡಿಸಿಕೊಳ್ಳಲು ಈ ಗುರುತುಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಪ್ರತಿಯೊಂದು ಮನೆಯಲ್ಲೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದಿನನಿತ್ಯದ ಅಗತ್ಯ ವಸ್ತುವಾಗಿದೆ. ಆದರೆ ಸಿಲಿಂಡರ್ ಬಳಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ. ಅದರಲ್ಲೂ ಹೊಸ ಸಿಲಿಂಡರ್ ಪಡೆಯುವಾಗ ಅದರ ಮೇಲಿರುವ ಕೆಲವು ಕೋಡ್‌ಗಳನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಜನರು ಸಿಲಿಂಡರ್ ಮೇಲಿರುವ ಅಕ್ಷರ ಮತ್ತು ಸಂಖ್ಯೆಗಳ ಸಂಯೋಜನೆಯನ್ನು ಗಮನಿಸುವುದೇ ಇಲ್ಲ. ಆದರೆ ಈ ಗುರುತುಗಳು ಸಿಲಿಂಡರ್‌ನ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತವೆ. ಸಿಲಿಂಡರ್‌ನ ಮೇಲ್ಭಾಗದ ಲೋಹದ ರಿಂಗ್ ಭಾಗದಲ್ಲಿ A-26, B-27, C-28 ಅಥವಾ D-29 ಮಾದರಿಯ ಕೋಡ್‌ಗಳನ್ನು ಕಾಣಬಹುದು.
ಸಾಮಾನ್ಯವಾಗಿ ಈ ಕೋಡ್‌ಗಳನ್ನು ಸಿಲಿಂಡರ್‌ನ ಅವಧಿ ಮುಗಿಯುವ ದಿನಾಂಕ ಎಂದು ಹಲವರು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ವಾಸ್ತವವಾಗಿ ಇದು ಎಕ್ಸ್‌ಪೈರಿ ದಿನಾಂಕವಲ್ಲ. ಸಿಲಿಂಡರ್‌ಗೆ ಮುಂದಿನ ಸುರಕ್ಷತಾ ಪರೀಕ್ಷೆ (Safety Test) ಯಾವಾಗ ನಡೆಸಬೇಕು ಎಂಬುದನ್ನು ಈ ಕೋಡ್‌ಗಳು ಸೂಚಿಸುತ್ತವೆ.
ಈ ಕೋಡ್‌ನಲ್ಲಿರುವ ಅಕ್ಷರಗಳು ವರ್ಷದ ನಿರ್ದಿಷ್ಟ ತ್ರೈಮಾಸಿಕವನ್ನು ಸೂಚಿಸುತ್ತವೆ. A ಎಂದರೆ ಜನವರಿಯಿಂದ ಮಾರ್ಚ್, B ಎಂದರೆ ಏಪ್ರಿಲ್‌ನಿಂದ ಜೂನ್, C ಎಂದರೆ ಜುಲೈನಿಂದ ಸೆಪ್ಟೆಂಬರ್ ಮತ್ತು D ಎಂದರೆ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯನ್ನು ಸೂಚಿಸುತ್ತದೆ.
ಇದರ ಜೊತೆಗೆ ಇರುವ ಸಂಖ್ಯೆಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ B-26 ಎಂದು ಇದ್ದರೆ 2026ರ ಏಪ್ರಿಲ್‌ನಿಂದ ಜೂನ್ ಅವಧಿಯೊಳಗೆ ಸಿಲಿಂಡರ್ ಸುರಕ್ಷತಾ ಪರೀಕ್ಷೆಗೆ ಒಳಪಡಬೇಕೆಂದು ಅರ್ಥ. ಹಾಗೆಯೇ D-28 ಎಂದರೆ 2028ರ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಪರೀಕ್ಷೆ ನಡೆಸಬೇಕು ಎಂಬ ಸೂಚನೆ.
ಗ್ಯಾಸ್ ಸಿಲಿಂಡರ್‌ಗಳು ಹಳೆಯದಾಗುತ್ತಿದ್ದಂತೆ ತುಕ್ಕು ಹಿಡಿಯುವುದು ಅಥವಾ ಸೋರಿಕೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿ ಅವುಗಳನ್ನು ನಿಯಮಿತವಾಗಿ ಹೈಡ್ರೋಸ್ಟಾಟಿಕ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರೀಕ್ಷೆಯಲ್ಲಿ ಸುರಕ್ಷಿತ ಎಂದು ದೃಢಪಟ್ಟರೆ ಹೊಸ ಕೋಡ್ ನೀಡಲಾಗುತ್ತದೆ. ಸಮಸ್ಯೆ ಕಂಡುಬಂದರೆ ಆ ಸಿಲಿಂಡರ್ ಅನ್ನು ಬಳಕೆಯಿಂದ ತೆಗೆದುಹಾಕಲಾಗುತ್ತದೆ.
ಆದ್ದರಿಂದ ಮುಂದಿನ ಬಾರಿ ಗ್ಯಾಸ್ ಸಿಲಿಂಡರ್ ಮನೆಗೆ ಬಂದಾಗ ಅದರ ಮೇಲಿರುವ ಕೋಡ್‌ನ್ನು ಒಮ್ಮೆ ಪರಿಶೀಲಿಸಿ. ನಿಗದಿತ ಪರೀಕ್ಷಾ ಅವಧಿ ಮೀರಿರುವ ಸಿಲಿಂಡರ್ ಕಂಡುಬಂದರೆ ತಕ್ಷಣವೇ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಬದಲಾವಣೆ ಕೇಳುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಕ್ರಮವಾಗಿದೆ.
ಇತ್ತೀಚೆಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಗ್ರಾಹಕರು ಸುರಕ್ಷತೆಯ ಜೊತೆಗೆ ಸಿಲಿಂಡರ್‌ನ ಸ್ಥಿತಿಯ ಮೇಲೂ ಹೆಚ್ಚಿನ ಗಮನಹರಿಸುವ ಅಗತ್ಯವಿದೆ.



