ಹೈಕೋರ್ಟ್ ಮಹತ್ವದ ತೀರ್ಪು: ಮಾಜಿ ಪತಿ ಮೃತಪಟ್ಟರೂ ವಿಚ್ಛೇದಿತ ಪತ್ನಿಗೆ ಸಿಗಲಿದೆ ಜೀವನಾಂಶ; ಆಸ್ತಿಯಲ್ಲೂ ಹಕ್ಕು ಭದ್ರ!

ವಿಚ್ಛೇದನದ ನಂತರ ಪತಿ ಮರಣ ಹೊಂದಿದರೆ ಮಾಜಿ ಪತ್ನಿಯ ಪರಿಸ್ಥಿತಿ ಏನಾಗಬಹುದು ಎಂಬ ಕಾನೂನಾತ್ಮಕ ಗೊಂದಲಕ್ಕೆ ಮುಂಬೈ ಹೈಕೋರ್ಟ್ ಮಹತ್ವದ ತೀರ್ಪಿನ ಮೂಲಕ ತೆರೆ ಎಳೆದಿದೆ.

ವಿಚ್ಛೇದನದ ನಂತರ ಪತಿ ಮರಣ ಹೊಂದಿದರೆ ಮಾಜಿ ಪತ್ನಿಯ ಪರಿಸ್ಥಿತಿ ಏನಾಗಬಹುದು ಎಂಬ ಕಾನೂನಾತ್ಮಕ ಗೊಂದಲಕ್ಕೆ ಮುಂಬೈ ಹೈಕೋರ್ಟ್ ಮಹತ್ವದ ತೀರ್ಪಿನ ಮೂಲಕ ತೆರೆ ಎಳೆದಿದೆ. ಪತಿಯ ಮರಣದ ನಂತರವೂ ಆತನ ಆಸ್ತಿಯಿಂದ ಜೀವನಾಂಶ ಪಡೆಯುವ ಸಂಪೂರ್ಣ ಹಕ್ಕು ಮಾಜಿ ಪತ್ನಿಗೆ ಇರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೃತರ ಪಾಲಿನ ಆಸ್ತಿಯನ್ನು ಯಾರು ವಾರಸುದಾರರಾಗಿ ಪಡೆಯುತ್ತಾರೋ, ಅವರೇ ಈ ಜೀವನಾಂಶದ ಹಣವನ್ನು ಪಾವತಿಸಬೇಕಾಗುತ್ತದೆ.

ನರೇನ್ ಗೋರೆಗಾಂವ್ಕರ್ ಎಂಬುವವರ ನಿಧನದ ಬಳಿಕ ಅವರ ಮಾಜಿ ಪತ್ನಿ ವರ್ಷಾ ಅವರಿಗೆ ಸಿಗುತ್ತಿದ್ದ ಜೀವನಾಂಶ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯ ಒದಗಿಸುವಂತೆ ಕೋರಿ ವರ್ಷಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಮತ್ತು ಮಂಜುಷಾ ದೇವ್ ಪಾಂಡೆ ಅವರಿದ್ದ ನ್ಯಾಯಪೀಠವು, ಪತಿಯ ಮರಣದ ಕಾರಣ ನೀಡಿ ಮಹಿಳೆಗೆ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂಬ ತೀರ್ಪು ಪ್ರಕಟಿಸಿತು.

ಇದನ್ನೂ ಓದಿ :  ರಾಜ್ಯದಲ್ಲಿ ಇಂದಿನಿಂದ ಗುಡುಗು – ಸಹಿತ ಮಳೆ.. ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!

ಇದೇ ವೇಳೆ ನ್ಯಾಯಾಲಯವು ಮತ್ತೊಂದು ಪ್ರಮುಖ ಅಂಶವನ್ನು ಕಾನೂನು ವ್ಯಾಪ್ತಿಯಡಿ ಸ್ಪಷ್ಟಪಡಿಸಿದೆ. ಕಾಲ ಬದಲಾದಂತೆ ಮೃತರ ಆಸ್ತಿಯ ಮೌಲ್ಯ ಹೆಚ್ಚಾಗಿದೆ ಅಥವಾ ಇಂದಿನ ದಿನಬಳಕೆ ವೆಚ್ಚಗಳು ದುಬಾರಿಯಾಗಿವೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಜೀವನಾಂಶದ ಮೊತ್ತವನ್ನು ಹೆಚ್ಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ. ಪತಿ ಮರಣ ಹೊಂದಿದ ಸಮಯದಲ್ಲಿ ಆಸ್ತಿಯು ಯಾವ ಸ್ಥಿತಿಯಲ್ಲಿತ್ತೋ, ಅದರ ಆಧಾರದ ಮೇಲಷ್ಟೇ ಜೀವನಾಂಶದ ಮೊತ್ತ ನಿರ್ಧಾರವಾಗುತ್ತದೆ ಎಂದು ಹೇಳಿದೆ.

ಅಲ್ಲದೆ, ಆಸ್ತಿಯನ್ನು ಹಂಚಿಕೊಂಡ ವಾರಸುದಾರರು ತಮ್ಮ ಸ್ವಂತ ಶ್ರಮದಿಂದ ಗಳಿಸಿದ ಆದಾಯ ಅಥವಾ ಆಸ್ತಿಯನ್ನು ಆಧರಿಸಿ ಮಾಜಿ ಪತ್ನಿಯು ಹೆಚ್ಚಿನ ಹಣವನ್ನು ಹಕ್ಕಿನ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ತೀರ್ಪು ದೇಶದ ವಿಚ್ಛೇದಿತ ಮಹಿಳೆಯರ ಆರ್ಥಿಕ ಭದ್ರತೆಗೆ ಕಾನೂನಿನ ಬಲ ನೀಡಿದಂತಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories