ಎಲ್‌ಪಿಜಿ ಸಬ್ಸಿಡಿಗೆ ಹೊಸ ಗಡುವು! ಜೂನ್ 30ರೊಳಗೆ ಈ ಕೆಲಸ ಮಾಡದಿದ್ರೆ ಸಬ್ಸಿಡಿ ಸಿಗಲ್ಲ

ಎಲ್‌ಪಿಜಿ ಸಬ್ಸಿಡಿ ಪಡೆಯುವ ಗ್ರಾಹಕರು ಜೂನ್ 30ರೊಳಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಬೇಕಿದ್ದು, ವಿಳಂಬವಾದರೆ ಸಬ್ಸಿಡಿ ತಾತ್ಕಾಲಿಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಅಡುಗೆ ಅನಿಲ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಎಲ್‌ಪಿಜಿ ಸಂಪರ್ಕ ಹೊಂದಿರುವವರು ನಿಗದಿತ ಅವಧಿಯೊಳಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದ್ದು, ಇಲ್ಲದಿದ್ದರೆ ಸಬ್ಸಿಡಿ ಹಣ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಎಂದು ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸೇರಿದಂತೆ ಸಬ್ಸಿಡಿ ಸೌಲಭ್ಯ ಪಡೆಯುತ್ತಿರುವ ಎಲ್ಲಾ ಗೃಹಬಳಕೆ ಗ್ರಾಹಕರಿಗೂ ಈ ನಿಯಮ ಅನ್ವಯವಾಗಲಿದೆ. ನಿಗದಿತ ದಿನಾಂಕದೊಳಗೆ ದೃಢೀಕರಣ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಬ್ಸಿಡಿ ಹಣ ಖಾತೆಗೆ ಜಮೆಯಾಗುವುದಿಲ್ಲ. ಬಳಿಕ ದೃಢೀಕರಣ ಪೂರ್ಣಗೊಳಿಸಿದರೂ ಮಧ್ಯಂತರ ಅವಧಿಯ ಸಬ್ಸಿಡಿ ಮೊತ್ತವನ್ನು ಮರಳಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಮುಖ ತೈಲ ಕಂಪನಿಗಳಿಗೆ ಈ ಕುರಿತು ಸೂಚನೆ ನೀಡಿದೆ. ಗ್ರಾಹಕರ ವಿವರಗಳನ್ನು ಪರಿಶೀಲಿಸಿ, ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸದವರ ಮಾಹಿತಿಯನ್ನು ಅಗತ್ಯವಿದ್ದರೆ ರಾಜ್ಯ ಸರ್ಕಾರಗಳಿಗೂ ಹಂಚಿಕೊಳ್ಳುವಂತೆ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ಸಹಾಯಧನ ಒದಗಿಸುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಕೂಡ ತಮ್ಮದೇ ಆದ ಹೆಚ್ಚುವರಿ ಸಬ್ಸಿಡಿ ಯೋಜನೆಗಳನ್ನು ಜಾರಿಗೊಳಿಸಿವೆ. ಹೀಗಾಗಿ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಕೇಂದ್ರ ಹಾಗೂ ರಾಜ್ಯ ಮಟ್ಟದ ಕೆಲವು ಸೌಲಭ್ಯಗಳು ಕೈತಪ್ಪುವ ಸಾಧ್ಯತೆ ಇದೆ.

ಆದರೆ ಕೇವಲ ಬಯೋಮೆಟ್ರಿಕ್ ದೃಢೀಕರಣ ಆಗಿಲ್ಲ ಎಂಬ ಕಾರಣಕ್ಕೆ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಬ್ಸಿಡಿ ತಡೆಹಿಡಿಯುವ ಕ್ರಮ ಮಾತ್ರ ಜಾರಿಯಾಗಲಿದೆ.

ಇನ್ನೂ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಿಸದ ಗ್ರಾಹಕರು ತಮ್ಮ ಸಮೀಪದ ಗ್ಯಾಸ್ ಏಜೆನ್ಸಿ ಅಥವಾ ವಿತರಕರನ್ನು ಸಂಪರ್ಕಿಸಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ. ಇದರಿಂದ ಸಬ್ಸಿಡಿ ಪಡೆಯುವಲ್ಲಿ ಯಾವುದೇ ಅಡಚಣೆ ಎದುರಾಗುವುದಿಲ್ಲ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »