ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಬಿರುಗಾಳಿ: ಶೇ. 37 ರಷ್ಟು ಫ್ರೆಶರ್ಸ್ ಕೆಲಸ ಈಗ ಕೃತಕ ಬುದ್ಧಿಮತ್ತೆ ಪಾಲು!

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯು ಉದ್ಯೋಗ ಮಾರುಕಟ್ಟೆಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿದೆ.

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯು ಉದ್ಯೋಗ ಮಾರುಕಟ್ಟೆಯ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಭಾವ ಅತ್ಯಂತ ಕ್ಷಿಪ್ರವಾಗಿ ಆಗುತ್ತಿದ್ದು, ಹೊಸಬರ ಉದ್ಯೋಗಾವಕಾಶಗಳ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ ಎಂದು ಪ್ರಮುಖ ಐಟಿ ಸಂಸ್ಥೆ ‘ಕಾಗ್ನಿಜೆಂಟ್’ ಮತ್ತು ‘ಪಿಯರ್ಸನ್’ ಜಂಟಿಯಾಗಿ ನಡೆಸಿರುವ ನೂತನ ಸಮೀಕ್ಷಾ ವರದಿ ತಿಳಿಸಿದೆ.

ವರದಿಯ ಪ್ರಕಾರ, ಪ್ರಸ್ತುತ ಜಾಗತಿಕವಾಗಿ ಆರಂಭಿಕ ಹಂತದ ಹುದ್ದೆಗಳ ಶೇಕಡಾ 33 ರಷ್ಟು ಕೆಲಸಗಳನ್ನು ಕೃತಕ ಬುದ್ಧಿಮತ್ತೆ ನಿರ್ವಹಿಸುತ್ತಿದ್ದರೆ, ಭಾರತದಲ್ಲಿ ಈ ಪ್ರಮಾಣವು ಶೇಕಡಾ 37 ಕ್ಕೆ ತಲುಪಿರುವುದು ತಜ್ಞರಲ್ಲಿ ಅಚ್ಚರಿ ಮೂಡಿಸಿದೆ. ಹಲವು ಪ್ರಮುಖ ಕಂಪನಿಗಳ ಎಚ್ಆರ್ ಅಧಿಕಾರಿಗಳ ಪ್ರಕಾರ, ಫ್ರೆಶರ್ಸ್ ಮಾಡುವ ಅರ್ಧಕ್ಕಿಂತ ಹೆಚ್ಚಿನ ಕೆಲಸಗಳನ್ನು ಈಗ ಎಐ ವ್ಯವಸ್ಥೆಗಳ ಮೂಲಕವೇ ಯಶಸ್ವಿಯಾಗಿ ಮಾಡಿಸಲಾಗುತ್ತಿದೆ. ಆದರೆ, ಈ ತಾಂತ್ರಿಕ ಕ್ರಾಂತಿಯಿಂದಾಗಿ ಉದ್ಯೋಗಗಳು ಸಂಪೂರ್ಣವಾಗಿ ನಷ್ಟವಾಗುತ್ತವೆ ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂದು ವರದಿ ಸಮಾಧಾನಪಡಿಸಿದೆ. ಬದಲಾಗಿ, ಮುಂಬರುವ ದಿನಗಳಲ್ಲಿ ಉದ್ಯೋಗಿಗಳ ಕೆಲಸದ ಶೈಲಿ ಮತ್ತು ಸ್ವರೂಪದಲ್ಲಿ ದೊಡ್ಡ ಬದಲಾವಣೆಗಳಾಗಲಿವೆ.

ಇದನ್ನೂ ಓದಿ : ಮುದ್ರಣ ಶಾಹಿಯಿಂದ ಕ್ಯಾನ್ಸರ್​ ಅಪಾಯ..ಇನ್ಮುಂದೆ ತಿಂಡಿ ಜೊತೆ ಪೇಪರ್​ ಬಳಕೆ ನಿಷೇಧ!

ಭವಿಷ್ಯದಲ್ಲಿ ಎಂಟ್ರಿ ಲೆವೆಲ್ ನೌಕರರು ಕೇವಲ ದೈನಂದಿನ ಸಣ್ಣಪುಟ್ಟ ಕೆಲಸಗಳಿಗೆ ಸೀಮಿತವಾಗದೆ, ಎಐ ವ್ಯವಸ್ಥೆಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪ್ರಮುಖ ಜವಾಬ್ದಾರಿಗಳನ್ನು ಹೊರಲಿದ್ದಾರೆ. ಈ ಹೊಸ ತಾಂತ್ರಿಕ ಯುಗದಲ್ಲಿ ಕಂಪನಿಗಳು ಅಭ್ಯರ್ಥಿಗಳಲ್ಲಿ ಕೇವಲ ತಾಂತ್ರಿಕ ಜ್ಞಾನವನ್ನು ಮಾತ್ರ ಎದುರು ನೋಡುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ಸಮಸ್ಯೆಗಳನ್ನು ಬಗೆಹರಿಸುವ ಮಾನವ ಕೌಶಲ್ಯ, ಹೊಂದಿಕೊಳ್ಳುವ ಗುಣ ಹಾಗೂ ಉತ್ತಮ ಸಂವಹನ ಕಲೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ತಂತ್ರಜ್ಞಾನದ ವೇಗದ ಓಟಕ್ಕೆ ತಕ್ಕಂತೆ ತಮ್ಮ ಉದ್ಯೋಗಿಗಳಿಗೆ ಸೂಕ್ತ ಎಐ ತರಬೇತಿ ನೀಡುವುದು ಸದ್ಯ ಭಾರತೀಯ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಯುವ ಉದ್ಯೋಗಿಗಳು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಹೊಸ ಕೌಶಲ್ಯಗಳನ್ನು ನಿರಂತರವಾಗಿ ಕಲಿಯುವುದು ಅತ್ಯಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories