ಯೋಗ ದಿನದಂದು ಬೆಂಗಳೂರಿನಲ್ಲಿ ಜಾಗತಿಕ ಇತಿಹಾಸ: ಒಂದೇ ದಿನ 21 ಗಿನ್ನೆಸ್ ದಾಖಲೆ ಬರೆದ ಅಕ್ಷರ ಯೋಗ ಕೇಂದ್ರ
akshar yoga kendraa 21 world records :. ನಗರದ ಪ್ರಖ್ಯಾತ 'ಅಕ್ಷರ ಯೋಗ ಕೇಂದ್ರ' ಒಂದೇ ದಿನ ಬರೋಬ್ಬರಿ 21 ಗಿನ್ನೆಸ್ ವಿಶ್ವ ದಾಖಲೆಗಳನ್ನು (Guinness World Records) ನಿರ್ಮಿಸುವ ಮೂಲಕ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.

akshar yoga kendraa 21 world records ಬೆಂಗಳೂರು: ಜೂನ್ 21, 2026 ರ ಅಂತರರಾಷ್ಟ್ರೀಯ ಯೋಗ ದಿನದಂದು ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮೂಡಿಬಂದಿದೆ. ನಗರದ ಪ್ರಖ್ಯಾತ ‘ಅಕ್ಷರ ಯೋಗ ಕೇಂದ್ರ‘ ಒಂದೇ ದಿನ ಬರೋಬ್ಬರಿ 21 ಗಿನ್ನೆಸ್ ವಿಶ್ವ ದಾಖಲೆಗಳನ್ನು (Guinness World Records) ನಿರ್ಮಿಸುವ ಮೂಲಕ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.
ಈ ಬೃಹತ್ ಯೋಗ ಆಂದೋಲನವು ಖ್ಯಾತ ಯೋಗ ಪಟು ಹಾಗೂ ಆಧ್ಯಾತ್ಮಿಕ ನಾಯಕ ಹಿಮಾಲಯನ್ ಸಿದ್ಧ ಅಕ್ಷರ್ ಅವರ ನೇತೃತ್ವದಲ್ಲಿ ನಡೆದಿದೆ. ಭಾರತದ ಪ್ರಾಚೀನ ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಅತ್ಯಂತ ವೈಭವವಾಗಿ ಪ್ರದರ್ಶಿಸಿತು.
ಭಾರತ ಸರ್ಕಾರದ ಆಯುಷ್ ಸಚಿವಾಲಯದ ಮಾನ್ಯತೆ ಪಡೆದಿರುವ ಅಕ್ಷರ ಯೋಗ ಸಂಸ್ಥೆಯು ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.ಅಮೆರಿಕ (USA), ಬ್ರಿಟನ್ (UK), ಇಟಲಿ, ತೈವಾನ್, ಮಲೇಷ್ಯಾ, ಹಾಂಗ್ ಕಾಂಗ್, ಸಿಂಗಾಪುರ್, ದುಬೈ ಮತ್ತು ಸೈಪ್ರಸ್ ಸೇರಿದಂತೆ ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಂದ 10,000 ಕ್ಕೂ ಅಧಿಕ ಯೋಗಾಸಕ್ತರು ಒಂದೇ ವೇದಿಕೆಯಲ್ಲಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಒಟ್ಟುಗೂಡಿದ್ದರು.
ಕಾರ್ಯಕ್ರಮದಲ್ಲಿ ಅತಿ ದೊಡ್ಡ ಹಂತವಾಗಿ ಸುಮಾರು 7,000 ಕ್ಕೂ ಹೆಚ್ಚು ಭಾಗಿಗಳು ಏಕಕಾಲದಲ್ಲಿ ‘ತ್ರತಕ್ ಧ್ಯಾನ’ವನ್ನು (Tratak Meditation) ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದಾದ ಬಳಿಕ ಅಂತಿಮ ಸುತ್ತಿಗೆ ಆಯ್ಕೆಯಾದ ಯೋಗ ಪಟುಗಳು ವಿವಿಧ ಕಠಿಣ ಯೋಗಾಸನಗಳನ್ನು 30 ಸೆಕೆಂಡ್‌ನಿಂದ 120 ಸೆಕೆಂಡ್‌ಗಳ ಕಾಲ ಅತ್ಯಂತ ನಿಖರತೆಯಿಂದ ಪ್ರದರ್ಶಿಸುವ ಮೂಲಕ, ಒಂದರ ಬೆನ್ನಿಗೊಂದರಂತೆ 20 ಪ್ರತ್ಯೇಕ ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದರು.
ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಗೆ ಕೂಡ ಆಯುಷ್ಯ ಇದೆ! ಅದರ ನಂತರ ಬಳಸಿದರೆ ಅಪಾಯ ಗ್ಯಾರಂಟಿ
ಈ ಮಹತ್ವಾಕಾಂಕ್ಷೆಯ ಪ್ರಯತ್ನದಲ್ಲಿ ಭಾರತೀಯ ಸೇನೆ, ವಾಯುಪಡೆ, ಬಿಎಸ್ಎಫ್, ಸಿಐಎಸ್ಎಫ್, ಸಿಆರ್ಪಿಎಫ್, ಕರ್ನಾಟಕ ರಾಜ್ಯ ಪೊಲೀಸ್, ಎನ್‌ಸಿಸಿ ಕೆಡೆಟ್‌ಗಳು ಸೇರಿದಂತೆ ವಿಶೇಷ ಚೇತನ ವ್ಯಕ್ತಿಗಳು, ಅನಾಥಾಶ್ರಮಗಳ ಮಕ್ಕಳು ಹಾಗೂ ಕಾರ್ಪೊರೇಟ್ ವಲಯದ ದಿಗ್ಗಜರು ಭಾಗವಹಿಸಿ ಯೋಗದ ಸಾರ್ವತ್ರಿಕ ಶಕ್ತಿಯನ್ನು ಎತ್ತಿಹಿಡಿದರು.
ಈ ಐತಿಹಾಸಿಕ ಸಾಧನೆಯ ಕುರಿತು ಮಾತನಾಡಿದ ಹಿಮಾಲಯನ್ ಸಿದ್ಧ ಅಕ್ಷರ್ ಅವರು, “ಇಂದು ಕೇವಲ ದಾಖಲೆಗಳನ್ನು ಸ್ಥಾಪಿಸುವುದಷ್ಟೇ ನಮ್ಮ ಗುರಿಯಾಗಿರಲಿಲ್ಲ; ಇದು ಮಾನವ ಸಾಮರ್ಥ್ಯವನ್ನು ಜಾಗೃತಗೊಳಿಸುವ ಪ್ರಯತ್ನ. ಸಾರ್ವತ್ರಿಕ ಒಳಿತಿಗಾಗಿ ಒಟ್ಟಾಗಿ ನಿಂತಾಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಈ ಗಿನ್ನೆಸ್ ದಾಖಲೆಗಳು ಸಾಬೀತುಪಡಿಸಿವೆ. ಶಿಸ್ತು ಮತ್ತು ಆಂತರಿಕ ಪಾಂಡಿತ್ಯವೇ ಯೋಗದ ನಿಜವಾದ ಯಶಸ್ಸು. ಈ ಮೂಲಕ ಭಾರತದ ಕಾಲಾತೀತ ಬುದ್ಧಿವಂತಿಕೆಯನ್ನು ನಾವು ವಿಶ್ವಕ್ಕೆ ಸಾರುತ್ತಿದ್ದೇವೆ” ಎಂದು ಹೆಮ್ಮೆಯಿಂದ ತಿಳಿಸಿದರು
ವಿಶ್ವಸಂಸ್ಥೆಯು ಈ ವರ್ಷ (2026) ಪ್ರಕಟಿಸಿರುವ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” (Yoga for Healthy Ageing) ಎಂಬ ಥೀಮ್‌ಗೆ ಪೂರಕವಾಗಿ ಅಕ್ಷರ ಯೋಗ ಕೇಂದ್ರದ ಈ ಪ್ರಯತ್ನ ಮೂಡಿಬಂದಿದೆ. ಮಾನಸಿಕ ನೆಮ್ಮದಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಯೋಗದ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿದೆ.
ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ 2 ಕೋಟಿಗೂ ಅಧಿಕ ಶಿಷ್ಯಂದಿರನ್ನು ಹಾಗೂ 50,000 ಕ್ಕೂ ಹೆಚ್ಚು ಪ್ರಮಾಣೀಕೃತ ಯೋಗ ಶಿಕ್ಷಕರನ್ನು ಹೊಂದಿರುವ ಅಕ್ಷರ ಯೋಗ ಕೇಂದ್ರ, ಇನ್ಫೋಸಿಸ್, ವಿಪ್ರೋ, ಅಮೆಜಾನ್‌ನಂತಹ ಜಾಗತಿಕ ಸಂಸ್ಥೆಗಳೊಂದಿಗೂ ಪಾಲುದಾರಿಕೆ ಹೊಂದಿದ್ದು, ಭಾರತದ ಯೋಗ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ.



