NIA Investigation : ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ: ಒಂದು ವರ್ಷದ ಬಳಿಕ ಮಂಗಳೂರಿಗೆ ಎನ್‌ಐಎ ಎಂಟ್ರಿ

ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ತನಿಖೆ ಇದೀಗ ಮತ್ತಷ್ಟು ಚುರುಕುಗೊಂಡಿದೆ.

ಮಂಗಳೂರು: ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ತನಿಖೆ ಇದೀಗ ಮತ್ತಷ್ಟು ಚುರುಕುಗೊಂಡಿದೆ. ಹತ್ಯೆ ನಡೆದು ಸುಮಾರು ಒಂದು ವರ್ಷದ ಬಳಿಕ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಅಧಿಕಾರಿಗಳ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ತನಿಖೆಯನ್ನು ಆರಂಭಿಸಿದೆ.

ಕೇಂದ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಪ್ರಕರಣ ಕೈಗೆತ್ತಿಕೊಂಡಿರುವ ಎನ್‌ಐಎ, ವಿದೇಶಿ ಫಂಡಿಂಗ್ ಹಾಗೂ ನಿಷೇಧಿತ ಸಂಘಟನೆಗಳ ಲಿಂಕ್ ಬೆನ್ನತ್ತಿ ಬಂದಿಳಿದಿರುವುದು ಕರಾವಳಿಯಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ. ಎನ್‌ಐಎ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ರಾಜವ್ ಸಿಂಗ್ ಮತ್ತು ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ಐದು ಅಧಿಕಾರಿಗಳ ಹಿರಿಯ ತಂಡ ಮಂಗಳವಾರವೇ ಬಜಪೆಗೆ ಆಗಮಿಸಿದೆ.

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಹಳೆಯ ದಾಖಲಾತಿಗಳು ಹಾಗೂ ಮಹತ್ವದ ಡೈರಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ನಿಷೇಧಿತ ಪಿಎಫ್‌ಐ (PFI) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಸ್ಥಳೀಯ ಕೆಲವು ವ್ಯಕ್ತಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಮಾತ್ರವಲ್ಲದೇ ಕೆಲವು ಶಂಕಿತರ ಚಲನವಲನಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷ (2025ರ ಆಗಸ್ಟ್ 2) ಸುರತ್ಕಲ್ ಮತ್ತು ಬಜಪೆ ಠಾಣಾ ವ್ಯಾಪ್ತಿಯ ಸುಮಾರು 14 ಪ್ರಮುಖ ಸ್ಥಳಗಳ ಮೇಲೆ ಎನ್‌ಐಎ ಅಧಿಕಾರಿಗಳು ಏಕಕಾಲದಲ್ಲಿ ಮೆಗಾ ದಾಳಿ ನಡೆಸಿದ್ದರು. ಆ ವೇಳೆ ವಶಪಡಿಸಿಕೊಳ್ಳಲಾದ ಡಿಜಿಟಲ್ ಪುರಾವೆಗಳು, ಬ್ಯಾಂಕ್ ಖಾತೆಗಳ ವಿವರ ಮತ್ತು ಡಾಕ್ಯುಮೆಂಟ್‌ಗಳ ಆಧಾರದ ಮೇರೆಗೆ ಈಗ ಎರಡನೇ ಹಂತದ ತನಿಖೆ ಆರಂಭವಾಗಿದೆ. ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನೇರ ವಿಚಾರಣೆಗೆ ಇಳಿದಿದ್ದಾರೆ ಎನ್ನಲಾಗಿದೆ.

Also Read: ವಿಟ್ಲ-ಮಂಗಳೂರು ಬಸ್ ಕೊರತೆ.. ಸರ್ಕಾರಿ ಎಕ್ಸ್​ಪ್ರೆಸ್​ ಸಾರಿಗೆಗಾಗಿ ಹೆಚ್ಚಿದ ಆಗ್ರಹ!

ಬಜಪೆ ಬಳಿಯ ಕಿನ್ನಿಪದವು ಜಂಕ್ಷನ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಕಾರಿನಲ್ಲಿ ಚಲಿಸುತ್ತಿದ್ದ ಸುಹಾಸ್ ಶೆಟ್ಟಿ ಅವರನ್ನು ಸಫವಾನ್ ನೇತೃತ್ವದ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿತ್ತು. ಕೊಲೆಯಾದ ಸುಹಾಸ್ ಶೆಟ್ಟಿ ಈ ಹಿಂದೆ ಸುರತ್ಕಲ್‌ನಲ್ಲಿ ನಡೆದಿದ್ದ ಮಹಮ್ಮದ್ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಫಾಜಿಲ್ ಸಹೋದರ ಆದಿಲ್ ಮಹ್ರೂಫ್, ಸುಹಾಸ್ ಶೆಟ್ಟಿ ಹತ್ಯೆಗಾಗಿ ಹಂತಕರಿಗೆ 3 ಲಕ್ಷ ರೂ. ಸುಪಾರಿ ನೀಡಿದ್ದ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿತ್ತು.

ಈ ಕೊಲೆಯ ಹಿಂದೆ ಸಂಘಟಿತ ಭಯೋತ್ಪಾದನಾ ಸಂಚು ಹಾಗೂ ವಿದೇಶದಿಂದ ಆರ್ಥಿಕ ಸಹಾಯ (Foreign Funding) ಹರಿದುಬಂದಿರುವ ಶಂಕೆ ವ್ಯಕ್ತವಾದ ಕಾರಣ, ದೇಶದ ಭದ್ರತೆಯ ದೃಷ್ಟಿಯಿಂದ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್‌ಐಎ ಹೆಗಲಿಗೆ ಒಪ್ಪಿಸಿತ್ತು. ಈಗಾಗಲೇ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ಸೇರಿದಂತೆ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಈಗ ಎನ್‌ಐಎ ರೀ-ಎಂಟ್ರಿಯಿಂದಾಗಿ ಈ ಹತ್ಯೆಯ ಹಿಂದಿರುವ ಅಸಲಿ ಮಾಸ್ಟರ್ ಮೈಂಡ್‌ಗಳು ಯಾರು ಎಂಬುದು ಶೀಘ್ರದಲ್ಲೇ ಬಯಲಾಗುವ ಸಾಧ್ಯತೆ ಇದೆ.

Suhas Shetty murder case NIA enters Mangaluru after a year

 

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories