
ನವಿಲುಗರಿ ಬಳಸಿ ಕಿಶನ್ ಮಾಡಿದ್ದ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಟೀಕೆಗೆ ಒಳಗಾಗಿತ್ತು. ಈ ಕುರಿತು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಿಶನ್, ಹೊಸ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಘಟನೆಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
” ಕೃಷ್ಣ ಜನ್ಮಾಷ್ಟಮಿ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಿಗೆ ಬಳಸುವಂತೆ, ನಾವು ಕೂಡ ವಿಡಿಯೋ ಕಾನ್ಸೆಪ್ಟ್ಗಾಗಿ ಅಂಗಡಿಯೊಂದರಿಂದ ಈ ನವಿಲುಗರಿಗಳನ್ನು ಬಾಡಿಗೆಗೆ ಪಡೆದುಕೊಂಡು ವಿಡಿಯೋ ಮಾಡಿದ್ದೇವೆ . ಯಾವುದೇ ಪಕ್ಷಿಗೆ ವೈಯಕ್ತಿಕವಾಗಿ ಹಾನಿ ಮಾಡಿ ಇದನ್ನು ತಂದಿರಲಿಲ್ಲ” ಎಂದು ಕಿಶನ್ ಅವರು ವಿವರಿಸಿದ್ದಾರೆ.
“ನವಿಲುಗರಿಗಳನ್ನು ಈ ರೀತಿ ಕಮರ್ಷಿಯಲ್ ಆಗಿ ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಅಪರಾಧ ಎಂಬ ಕಾನೂನಿನ ಅರಿವು ನಮ್ಮ ಇಡೀ ತಂಡಕ್ಕೆ ಇರಲಿಲ್ಲ. ನೋಟಿಸ್ ಬಂದ ತಕ್ಷಣ ಅಧಿಕಾರಿಗಳು ನಮಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಜವಾಬ್ದಾರಿಯಿಂದ ನಾವು ತಕ್ಷಣವೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ನಮ್ಮ ನಡೆ ಯಾರಿಗಾದರೂ ಬೇಸರ ತಂದಿದ್ದರೆ ನಾನು ನಿಜಕ್ಕೂ ಕ್ಷಮೆ ಕೇಳುತ್ತೇನೆ” ಎಂದು ಅವರು ತಿಳಿಸಿದ್ದಾರೆ.



